“ಮಣಿಪುರದ ಕೋಮ್ ಗ್ರಾಮಗಳನ್ನು ರಕ್ಷಿಸಿ”: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮೇರಿ ಕೋಮ್ ಪತ್ರ
ಮೇರಿ ಕೋಮ್ / ಅಮಿತ್ ಶಾ (PTI)
ಇಂಫಾಲ್: ಮಣಿಪುರದ ಕೋಮ್ ಗ್ರಾಮಗಳಿಗೆ ರಾಜ್ಯದಲ್ಲಿ ಪರಸ್ಪರ ಘರ್ಷಣೆಯಲ್ಲಿ ತೊಡಗಿಕೊಂಡಿರುವ ಗುಂಪುಗಳು ಪ್ರವೇಶಿಸದಂತೆ ತಡೆಯುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಬೇಕೆಂದು ಬಾಕ್ಸಿಂಗ್ ತಾರೆ ಎಂ ಸಿ ಮೇರಿ ಕೋಮ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೋರಿ ಪತ್ರ ಬರೆದಿದ್ದಾರೆ. ಮಣಿಪುರದ ಅಲ್ಪಸಂಖ್ಯಾತರ ಪೈಕಿ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಮೂಲನಿವಾಸಿ ಬುಡಕಟ್ಟು ಸಮುದಾಯ ಕೋಮ್ ಸಮುದಾಯವಾಗಿದೆ.
“ಸಂಘರ್ಷದಲ್ಲಿರುವ ಎರಡು ಸಮುದಾಯಗಳ ನಡುವೆ ನಾವು ಹಂಚಿ ಹೋಗಿದ್ದೇವೆ. ಎರಡೂ ಕಡೆಗಳು ನಮ್ಮ ಸಮುದಾಯದ ಬಗ್ಗೆ ಶಂಕೆಗಳನ್ನು ಹೊಂದಿವೆ. ನಮ್ಮ ಕಡಿಮೆ ಜನಸಂಖ್ಯೆಯಿಂದಾಗಿ ನಮ್ಮ ವ್ಯಾಪ್ತಿಗೆ ಬರುವವರನ್ನು ತಡೆಯುವುದು ನಮಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೋಮ್ ಗ್ರಾಮಗಳಿಗೆ ಈ ಘರ್ಷಿಸುತ್ತಿರುವ ಗುಂಪುಗಳು ಪ್ರವೇಶಿಸದಂತೆ ಭದ್ರತಾಪಡೆಗಳು ಸಹಾಯ ಮಾಡಬೇಕು,” ಎಂದು ಮೇರಿ ಕೋಮ್ ಅವರು ಗೃಹ ಸಚಿವರನ್ನು ವಿನಂತಿಸಿದ್ದಾರೆ.
ಮಣಿಪುರದ ಜನತೆಯನ್ನು ರಕ್ಷಿಸಲು ನಿಷ್ಪಕ್ಷಪಾತವಾಗಿ ಎಲ್ಲಾ ಭದ್ರತಾ ಪಡೆಗಳು ಶ್ರಮಿಸಬೇಕು ಹಾಗೂ ರಾಜ್ಯದಲ್ಲಿ ಶಾಂತಿ ಪುನಃಸ್ಥಾಪಿಸಬೇಕೆಂದು ಅವರು ಕೋರಿದ್ದಾರೆ.
ಮಣಿಪುರದ ಮೈತೈ ಮತ್ತು ಕುಕಿ ಝೋ ಸಮುದಾಯಗಳೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.