ಮಥುರಾ: 5 ವರ್ಷದ ಬಾಲಕಿಯ ಛಿದ್ರಗೊಂಡ ದೇಹ ಭಾಗಗಳು ಪತ್ತೆ

ಸಾಂದರ್ಭಿಕ ಚಿತ್ರ | PC : PTI
ಸೀತಾಪುರ: ಉತ್ತರಪ್ರದೇಶದ ಮಥುರಾ ಪೊಲೀಸ್ ಠಾಣೆ ಸಮೀಪದ ಹೊಲದಲ್ಲಿ ಐದು ವರ್ಷದ ಬಾಲಕಿಯ ಛಿದ್ರಗೊಂಡ ದೇಹದ ಭಾಗಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾಲಕಿ ಫೆಬ್ರವರಿ 25ರಂದು ನಾಪತ್ತೆಯಾಗಿದ್ದಳು.
ಮರು ದಿನ ಆಕೆಯ ತುಂಡಾದ ಕಾಲು ಹೊಲದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಬಾಲಕಿಯ ಮೇಲೆ ಪ್ರಾಣಿಗಳು ದಾಳಿ ಮಾಡಿರುವ ಬಗ್ಗೆ ಶಂಕಿಸಲಾಗಿತ್ತು ಎಂದು ಸೀತಾಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರವೀಣ್ ರಂಜನ್ ತಿಳಿಸಿದ್ದಾರೆ.
ಆದರೆ, ಬಾಲಕಿಯ ಕುಟುಂಬ, ತಮ್ಮ ಪುತ್ರಿಯ ಹತ್ಯೆ ನಡೆಸಲಾಗಿದೆ. ಆದುದರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.
ಫೆಬ್ರವರಿ 27ರಂದು ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸಿದ ಸಂದರ್ಭ ಹೊಲದಲ್ಲಿ ಮೃತದೇಹದ ಉಳಿದ ಭಾಗಗಳು ಪತ್ತೆಯಾಗಿದ್ದವು. ಇದರಲ್ಲಿ ಇನ್ನೊಂದು ತುಂಡರಿಸಲಾದ ಕಾಲು ಹಾಗೂ ಎದೆಯಿಂದ ತಲೆ ವರೆಗಿನ ಮುಂಡ ಭಾಗ ಪತ್ತೆಯಾಗಿದ್ದವು.
ವಿಧಿವಿಜ್ಞಾನ ತಂಡಗಳು ಮಾದರಿಗಳನ್ನು ಸಂಗ್ರಹಿಸಿದ್ದವು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯನ್ನು ಕತ್ತು ಹಿಸುಕಿ ಹತ್ಯೆಗೈಯಲಾಗಿದೆ ಎಂಬುದು ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮೂವರನ್ನು ಬಂಧಿಸಲಾಗಿದೆ. ತನಿಖೆಗೆ ನೆರವು ನೀಡಲು ಕಣ್ಗಾವಲು ತಂಡವನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.