ರಾಷ್ಟ್ರ ರಾಜಧಾನಿಯಲ್ಲಿ 20 ವರ್ಷಗಳಲ್ಲೇ ಗರಿಷ್ಠ ಮಳೆ
Photo: PTI
ಹೊಸದಿಲ್ಲಿ: ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಶಕಗಳಲ್ಲೇ ಗರಿಷ್ಠ ಮಳೆ ಶನಿವಾರ ದಾಖಲಾಗಿದೆ. ಶನಿವಾರ ಬೆಳಿಗ್ಗೆ 8.30ರಿಂದ ಸಂಜೆ 5.30ರ ಅವಧಿಯಲ್ಲಿ ನಗರದಲ್ಲಿ 126.1 ಮಿಲಿಮೀಟರ್ ಮಳೆಯಾಗಿದ್ದು, 2003ರ ಜುಲೈ 10ರಂದು 133.4 ಮಿಲಿಮೀಟರ್ ಮಳೆ ಬಿದ್ದುದನ್ನು ಹೊರತುಪಡಿಸಿದರೆ ಇದು ಗರಿಷ್ಠ ಮಳೆಯಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ಶನಿವಾರ ಇಡೀ ದಿನದ ಮಾಹಿತಿ ಬಂದ ಬಳಿಕ ನೈಜ ಚಿತ್ರಣ ದೊರಕಲಿದೆ. 1958ರ ಜುಲೈನಲ್ಲಿ 24 ಗಂಟೆಗಳ ಅವಧಿಯಲ್ಲಿ ಗರಿಷ್ಠ ಅಂದರೆ 266.2 ಮಿಲಿಮೀಟರ್ ಮಳೆ ಬಿದ್ದಿತ್ತು. ಮುಂಗಾರು ಮಳೆಯ ಅಬ್ಬರಕ್ಕೆ ರಾಜಧಾನಿಯಲ್ಲಿ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಜನ ಭಾರಿ ತೊಂದರೆ ಅನುಭವಿಸಬೇಕಾಯಿತು. ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಂಡಿದೆ. ಇದರ ಪರಿಣಾಮವಾಗಿ ರಸ್ತೆ ಸಂಚಾರದ ಸಿಗ್ನಲ್ಗಳು ಕಾರ್ಯ ನಿರ್ವಹಿಸಿದೇ, ಸಂಚಾರ ದಟ್ಟಣೆ ಉಂಟಾಯಿತು. ಬೆಳಿಗ್ಗೆಯಿಂದ ಹಲವು ಗಂಟೆಗಳ ಕಾಲ ನಿರಂತರ ಮಳೆ ಬಿದ್ದ ಪರಿಣಾಮ ನಗರದ ಜನಪ್ರಿಯ ಶಾಪಿಂಗ್ ತಾಣವಾದ ಕನೌಟ್ ಪ್ಲೇಸ್ನಲ್ಲಿ ಅಂಗಡಿ ಮುಂಗಟ್ಟುಗಳು ಕೂಡಾ ಜಲಾವೃತವಾಗಿವೆ. ನೀರು ನಿಂತ ಕಾರಣದಿಂದ ಮಿಂಟೊ ಬ್ರಿಡ್ಜ್ ಅಂಡರ್ಪಾಸ್ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.