“ಅಸ್ಪೃಶ್ಯತೆಯ ಕಾಯಿಲೆಯನ್ನು ಹರಡಬಹುದು”: ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಹೋಟೆಲ್ ಮಾಲಕರಿಗೆ ಹೆಸರು ಪ್ರದರ್ಶಿಸಲು ಸೂಚಿಸಿದ್ದಕ್ಕೆ ಬಿಜೆಪಿ ನಾಯಕ ನಖ್ವಿ ಅಸಮಾಧಾನ
ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ (PTI)
ಹೊಸದಿಲ್ಲಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಎಲ್ಲಾ ಹೋಟೆಲ್ ಮತ್ತು ಆಹಾರ ಮಳಿಗೆಗಳ ಮಾಲೀಕರು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕೆಂದು ಮುಝಫ್ಫರನಗರ ಪೊಲೀಸರ ಸೂಚನೆಯ ಕುರಿತು ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಹಾಗೂ “ಇದು ಅಸ್ಪೃಶ್ಯತೆಯ ಕಾಯಿಲೆಯನ್ನು ಹರಡಬಹುದು” ಎಂದು ಹೇಳಿದ್ದಾರೆ.
“ಕೆಲ ಅತಿ ಉತ್ಸಾಹಿ ಅಧಿಕಾರಿಗಳ ಅವಸರದ ಆದೇಶಗಳು ಅಸ್ಪೃಶ್ಯತೆಯ ಕಾಯಿಲೆಯನ್ನು ಹರಡಬಹುದು. ಧರ್ಮವನ್ನು ಗೌರವಿಸಬೇಕು, ಆದರೆ ಅಸ್ಪೃಶ್ಯತೆಯನ್ನು ಪ್ರೋತ್ಸಾಹಿಸಬಾರದು,” ಎಂದು ಪರೋಕ್ಷವಾಗಿ ಆದೇಶವನ್ನು ಟೀಕಿಸಿದ್ದಾರೆ.
ತಮ್ಮ ಪೋಸ್ಟ್ಗೆ ತಮ್ಮನ್ನು ಹಲವರು ಟ್ರೋಲ್ ಮಾಡಿರುವುದನ್ನೂ ಗಮನಿಸಿ ಇನ್ನೊಂದು ಟ್ವೀಟ್ ಮಾಡಿದ ನಖ್ವಿ, “ನನಗೆ ಕನ್ವರ್ ಯಾತ್ರೆ ಕುರಿತು ಗೌರವ ಮತ್ತು ಭಕ್ತಿಯ ಕುರಿತಂತೆ ಪ್ರಮಾಣಪತ್ರ ನೀಡಬೇಡಿ. ಯಾವುದೇ ಧರ್ಮವು ಅಸಹಿಷ್ಣುತೆ ಮತ್ತು ಅಸ್ಪೃಶ್ಯತೆಗೆ ಒತ್ತೆಯಾಳಾಗಬಾರದು ಎಂದು ನಾನು ಸದಾ ನಂಬಿದ್ದೇನೆ,” ಎಂದು ಅವರು ಹೇಳಿದ್ದಾರೆ.
ತಾನು ಹಿಂದೆ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದ ಫೋಟೋವನ್ನೂ ಅವರು ಪೋಸ್ಟ್ ಮಾಡಿದ್ದಾರೆ.
अरे ट्रोलर टट्टुओं...कांवड यात्रा के सम्मान, श्रद्धा का सर्टिफिकेट कम से कम मुझे तो मत बाटो, मेरा हमेशा मानना है कि "कोई भी आस्था असहिष्णुता,अस्पृश्यता की बन्धक नहीं होनी चाहिए" pic.twitter.com/84shtbiwt5
— Mukhtar Abbas Naqvi (@naqvimukhtar) July 18, 2024