ಮಾನಹಾನಿ ಪ್ರಕರಣ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಬಂಧನ

ಮೇಧಾ ಪಾಟ್ಕರ್ (PTI)
ಹೊಸದಿಲ್ಲಿ: ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಎಲ್.ಜಿ.ಸಕ್ಸೇನಾ ಅವರು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕೇತ್ ನ್ಯಾಯಾಲಯವೊಂದು ಹೊರಡಿಸಿದ್ದ ಜಾಮೀನು ರಹಿತ ವಾರೆಂಟ್ ಆಧರಿಸಿ, ಶುಕ್ರವಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಂದು (ಶುಕ್ರವಾರ) ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಮಾನಹಾನಿ ಪ್ರಕರಣದಲ್ಲಿ ತಾತ್ಕಾಲಿಕ ಬಾಂಡ್ ಸಲ್ಲಿಸಿ ಹಾಗೂ ಒಂದು ಲಕ್ಷ ರೂ. ದಂಡವನ್ನು ಜಮೆ ಮಾಡಿ ಎಂದು ನೀಡಿದ್ದ ಆದೇಶವನ್ನು ಮೇಧಾ ಪಾಟ್ಕರ್ ಉಲ್ಲಂಘಿಸಿದ್ದಾರೆ ಎಂಬ ಸಂಗತಿಯನ್ನು ಗುರುವಾರ ದಿಲ್ಲಿ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.
ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಸಲ್ಲಿಸಲಾಗಿರುವ ಅರ್ಜಿಯು ಕ್ಷುಲ್ಲಕ ಹಾಗೂ ಕುಚೋದ್ಯದ್ದದಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ, ನಮ್ಮನ್ನು ವಂಚಿಸಲು ಈ ಅರ್ಜಿ ಸಲ್ಲಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತು.
"ಮೇಧಾ ಪಾಟ್ಕರ್ ಅವರು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವುದು, ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ತಪ್ಪಿಸಿಕೊಳ್ಳುತ್ತಿರುವುದು ಹಾಗೂ ಅವರ ವಿರುದ್ಧ ನೀಡಲಾಗಿದ್ದ ತೀರ್ಪಿನಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿರುವುದು ಅವರನ್ನು ದೋಷಿಯೆಂದು ಘೋಷಿಸುತ್ತಿರುವುದರ ಹಿಂದಿನ ಉದ್ದೇಶವಾಗಿದೆ. ಎಪ್ರಿಲ್ 8ರಂದು ಈ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅಮಾನತುಗೊಳಿಸುವ ಯಾವ ಆದೇಶವೂ ಚಾಲ್ತಿಯಲ್ಲಿಲ್ಲ" ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇಂತಹ ಸನ್ನಿವೇಶದಲ್ಲಿ ಅವರನ್ನು ಬಲವಂತವಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮಾಡದೆ ಬೇರೆ ಆಯ್ಕೆಯೇ ಉಳಿದಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.