ನಾನು ಬಿಜೆಪಿ ಸೇರುತ್ತೇನೆ ಎಂಬ ವದಂತಿ ಸೃಷ್ಟಿಸಿದ್ದು ಮಾಧ್ಯಮ: ಕಮಲ್ ನಾಥ್
ಕಮಲ್ ನಾಥ್ | Photo: PTI
ಹೊಸದಿಲ್ಲಿ : ತಾನು ಬಿಜೆಪಿ ಸೇರುತ್ತೇನೆ ಎಂಬ ವದಂತಿ ಸೃಷ್ಟಿಸಿದ್ದು ಮಾಧ್ಯಮ. ನಾನು ಅಂತಹ ಹೇಳಿಕೆಯನ್ನು ಯಾವತ್ತೂ ನೀಡಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಕಮಲ್ ನಾಥ್ ಮಂಗಳವಾರ ಹೇಳಿದ್ದಾರೆ.
ತಾವು ಪ್ರತಿನಿಧಿಸುತ್ತಿರುವ ಛಿಂದ್ವಾರ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಕಮಲ್ನಾಥ್ ಅವರು ಬಿಜೆಪಿ ಸೇರ್ಪಡೆ ವದಂತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.
‘‘ಇಂತಹ ವದಂತಿ ಹರಡುತ್ತಿರುವುದು ನೀವು (ಮಾಧ್ಯಮ). ಬೇರೆ ಯಾರೂ ಈ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಸೇರುವ ವಿಚಾರದ ಬಗ್ಗೆ ನೀವು ಎಂದಾದರೂ ನನ್ನಲ್ಲಿ ಕೇಳಿದ್ದೀರ? ನೀವೇ ಸುದ್ದಿ ಮಾಡಿ ನಂತರ ನನ್ನ ಬಳಿ ಬಂದು ಕೇಳುತ್ತೀರಾ?’’ ಎಂದು ಅವರು ಪ್ರಶ್ನಿಸಿದರು.
ಈ ನಡುವೆ, ಮಧ್ಯ ಪ್ರದೇಶದ ವಿವಿಧ ಭಾಗಗಳಲ್ಲಿ ಇತ್ತೀಚಿಗೆ ಆಲಿಕಲ್ಲು ಹಾಗೂ ಅಕಾಲಿಕ ಮಳೆಯಿಂದ ರೈತರು ತೊಂದರೆಗೊಳಗಾದ ಕುರಿತು ಪ್ರಶ್ನಿಸಿದಾಗ ಕಮಲ್ನಾಥ್, ರೈತರಿಗೆ ಪರಿಹಾರ ನೀಡುವ ಕುರಿತು ತಾನು ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.
ಕಮಲ್ನಾಥ್ ಅವರು ಬಿಜೆಪಿ ಸೇರುವ ಯಾವುದೇ ಚಿಂತನೆ ಇಲ್ಲ ಎಂದು ಅವರ ಸಹವರ್ತಿಗಳು ಹಾಗೂ ದಿಗ್ವಿಜಯ ಸಿಂಗ್, ಜಿತೇಂದ್ರ ಸಿಂಗ್ ಅವರಂತಹ ಹಿರಿಯ ನಾಯಕರು ಮತ್ತೆ ಮತ್ತೆ ಹೇಳಿದ ಹೊರತಾಗಿಯೂ ವದಂತಿ ತೀವ್ರಗೊಂಡಿತ್ತು.
‘‘ಬಿಜೆಪಿಗೆ ಕಮಲ್ನಾಥ್ ಅವರ ಅಗತ್ಯ ಇಲ್ಲ. ಅವರಿಗೆ ಬಿಜೆಪಿಯ ಬಾಗಿಲು ಮುಚ್ಚಿದೆ’’ ಎಂದು ಮಧ್ಯಪ್ರದೇಶದ ಸಚಿವ ಕೈಲಾಸ್ ವಿಜಯವರ್ಗೀಯ ಅವರು ಹೇಳಿದ್ದರು.