ಬಿಜೆಪಿ ಅಧ್ಯಕ್ಷರ ನಿವಾಸದಲ್ಲಿ ಶಾ, ನಾಯ್ಡು ಸೇರಿದಂತೆ ಎನ್ಡಿಎ ನಾಯಕರ ಸಭೆ
PC : PTI
ಹೊಸದಿಲ್ಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಬುಧವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಎನ್ಡಿಎ ನಾಯಕರು ಪಾಲ್ಗೊಂಡಿದ್ದರು.
ಕೇಂದ್ರ ಗೃಹಸಚಿವ ಅಮಿತ್ ಶಾ,ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ಹಾಗೂ ಕೇಂದ್ರ ಸಚಿವ ರಾಜೀವ ರಂಜನ್ ಸಿಂಗ್, ಅಪ್ನಾ ದಲ್(ಎಸ್) ಅಧ್ಯಕ್ಷೆ ಹಾಗೂ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್, ಜೆಡಿಎಸ್ ನಾಯಕ ಹಾಗೂ ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಹಾರದ ಎಚ್ಎಎಂ ನಾಯಕ ಹಾಗೂ ಕೇಂದ್ರ ಸಚಿವ ಜಿತನ್ ರಾಮ ಮಾಂಝಿ, ಆರ್ಎಲ್ಎಂ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹ ಹಾಗೂ ಭಾರತೀಯ ಧರ್ಮ ಜನ ಸೇನಾ ಅಧ್ಯಕ್ಷ ತುಷಾರ ವೆಲ್ಲಪ್ಪಲ್ಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಅಜೆಂಡಾ ಕುರಿತು ಯಾವುದೇ ಅಧಿಕೃತ ಹೇಳಿಕೆ ಇಲ್ಲವಾದರೂ, ಉತ್ತಮ ಆಡಳಿತ ಮತ್ತು ರಾಜಕೀಯ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಬಲ್ಲ ಮೂಲಗಳು ತಿಳಿಸಿದವು.
ಉತ್ತಮ ಆಡಳಿತ ವಾಜಪೇಯಿ ಸರಕಾರದ ಪ್ರಮುಖ ಧ್ಯೇಯವಾಗಿತ್ತು. ಮೊದಲ ಸಮ್ಮಿಶ್ರ ಸರಕಾರವನ್ನು ಪೂರ್ಣಾವಧಿಗೆ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಹೊಂದಿರುವ ಬಿಜೆಪಿ ದಿಗ್ಗಜ ವಾಜಪೇಯಿಯವರ ಜನ್ಮದಿನದಂದು ಎನ್ಡಿಎ ಸಭೆಯನ್ನು ನಡೆಸಲು ನಿರ್ಧರಿಸಲಾಗಿತ್ತು. ಏಕಕಾಲಿಕ ಚುನಾವಣೆಗಳ ಮೇಲೆ ಎನ್ಡಿಎ ಗಮನವನ್ನು ಕೇಂದ್ರೀಕರಿಸಿರುವ ನಡುವೆಯೇ ಈ ಸಭೆ ನಡೆದಿದೆ. ಈ ಪ್ರಸ್ತಾವವನ್ನು ಎನ್ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳು ಬೆಂಬಲಿಸಿವೆ.
ಏಕಕಾಲಿಕ ಚುನಾವಣೆಗಾಗಿ ಸಂಸತ್ತಿನಲ್ಲಿ ಮಂಡಿಸಲಾದ ಎರಡು ವಿಧೇಯಕಗಳ ಪರಿಶೀಲನೆಗಾಗಿ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಯು ಜ.8ರಂದು ಸಭೆ ಸೇರುವ ನಿರೀಕ್ಷೆಯಿದೆ.