70 ಕಿಮೀ ಉದ್ದದ ಭಾರತ-ಮಯನ್ಮಾರ್ ಗಡಿ ಬೇಲಿ ನಿರ್ಮಾಣದ ಕುರಿತು ಸಭೆ: ಇದು ತುರ್ತು ಅಗತ್ಯ ಎಂದ ಮಣಿಪುರ ಸಿಎಂ
ಎನ್. ಬಿರೇನ್ ಸಿಂಗ್, Photo: X \ @NBirenSingh
ಇಂಫಾಲ: ನೆರೆಯ ಮಯನ್ಮಾರ್ ದೇಶದಿಂದ ಮಣಿಪುರಕ್ಕೆ ನುಸುಳುತ್ತಿರುವ ಅಕ್ರಮ ವಲಸಿಗರನ್ನು ತಡೆಯಲು ಇಂದು (ರವಿವಾರ) ಭಾರತ-ಮಯನ್ಮಾರ್ ಗಡಿಯ ಬೇಲಿಯನ್ನು 70 ಕಿಮೀಯಷ್ಟು ವಿಸ್ತರಿಸುವ ಕುರಿತು ಗಂಭೀರ ಚರ್ಚೆ ನಡೆಸಲಾಯಿತು ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ x ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಭಾರತ-ಮಯನ್ಮಾರ್ ಗಡಿಯಲ್ಲಿ ಮುಕ್ತ ಸಂಚಾರ ಅವಧಿಯನ್ನು ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಬಿರೇನ್ ಸಿಂಗ್ ಆಗ್ರಹಿಸಿದ ಮರುದಿನ, ರಾಜ್ಯ ಮುಖ್ಯ ಕಾರ್ಯದರ್ಶಿ, ಗಡಿ ರಸ್ತೆಗಳ ಸಂಸ್ಥೆಯ ಅಧಿಕಾರಿಗಳು, ರಾಜ್ಯ ಪೊಲೀಸ್ ಇಲಾಖೆ ಹಾಗೂ ಗೃಹ ಇಲಾಖೆಯೊಂದಿಗೆ ಅವರು ಸಭೆ ನಡೆಸಿದರು.
ಮುಕ್ತ ಸಂಚಾರ ಅವಧಿಯು ಭಾರತ-ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ಉಭಯ ದೇಶಗಳ ನಿವಾಸಿಗಳು ಯಾವುದೇ ದಾಖಲೆಗಳಿಲ್ಲದೆ 16 ಕಿಮೀಯಷ್ಟು ದೂರ ಪರಸ್ಪರರ ಸ್ಥಳಗಳಿಗೆ ತೆರಳಲು ಅವಕಾಶ ನೀಡುತ್ತದೆ. ಇದರಿಂದಾಗಿ, ಭಾರತದ ಗಡಿಯೊಳಗೆ ಕನಿಷ್ಠ 14-15 ಕಿಮೀಯಷ್ಟು ಒಳಗೆ ನೆಲೆಸಿರುವ ಅಕ್ರಮ ವಲಸಿಗರು ಭದ್ರತಾ ಪಡೆಗಳಿಗೆ ಕೇವಲ ಚೀಟಿಯೊಂದನ್ನು ನೀಡಿ ದೇಶದೊಳಗೆ ನುಸುಳಬಹುದಾಗಿದೆ ಎಂದು ಶನಿವಾರ ಮುಖ್ಯಮಂತ್ರಿ ಬಿರೇನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದರು.
ಆದರೆ, ವ್ಯೂಹಾತ್ಮಕ ಕಾರ್ಯಾಚರಣೆ ತಜ್ಞರು ಭಾರತ-ಮಯನ್ಮಾರ್ ಗಡಿಯುದ್ದಕ್ಕೂ ಬೇಲಿ ನಿರ್ಮಿಸುವುದು ಪ್ರಾದೇಶಿಕ ಭೌಗೋಳಿಕತೆ ಹಾಗೂ ವೆಚ್ಚದ ದೃಷ್ಟಿಯಿಂದ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಅತಿ ಹೆಚ್ಚು ಅಕ್ರಮ ವಲಸೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಡಿಗಳಲ್ಲಿ ಮಾತ್ರ ಸುಲಭವಾಗಿ ಬೇಲಿಯನ್ನು ನಿರ್ಮಿಸಬಹುದು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಭದ್ರತಾ ಪಡೆಗಳು ಹಾಗೂ ದುಷ್ಕರ್ಮಿಗಳ ನಡುವೆ ಆಗಾಗ ಪರಸ್ಪರ ಗುಂಡಿನ ದಾಳಿಗಳು ನಡೆಯುತ್ತಿದ್ದರೂ, ಮಣಿಪುರ ರಾಜ್ಯವು ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿದೆ.