ಸರಕಾರಿ ಉದ್ಯೋಗಿಗಳ ವಜಾ ಪ್ರಕರಣಗಳ ಮರುಪರಿಶೀಲನೆಗೆ ಮೆಹಬೂಬಾ ಮನವಿ
ಮೆಹಬೂಬಾ ಮುಫ್ತಿ | PC : PTI
ಶ್ರೀನಗರ : ಕಳೆದ ಐದು ವರ್ಷಗಳ ರಾಷ್ಟ್ರಪತಿ ಆಳ್ವಿಕೆಯ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರಿ ಉದ್ಯೋಗಿಗಳನ್ನು “ಕ್ಷುಲ್ಲಕ ಕಾರಣ”ಗಳಿಗಾಗಿ ವಜಾಗೊಳಿಸಲಾಗಿರುವ ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ನಾಯಕಿ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಕೇಂದ್ರ ಸರಕಾರವು 2019ರಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ, ಸಂವಿಧಾನದ 311(2) ವಿಧಿಯನ್ವಯ ಸುಮಾರು 60 ಸರಕಾರಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಸಂವಿಧಾನದ 311(2) ವಿಧಿಯು ಸರಕಾರಿ ಉದ್ಯೋಗಿಗಳನ್ನು ಯಾವುದೇ ವಿಚಾರಣೆ ಇಲ್ಲದೆಯೇ ವಜಾಗೊಳಿಸಲು ಸರಕಾರಕ್ಕೆ ಅಧಿಕಾರಕ್ಕೆ ನೀಡುತ್ತದೆ. “ರಾಜ್ಯದ ಭದ್ರತೆಯ ಹಿತಾಸಕ್ತಿಯಿಂದ ಉದ್ಯೋಗಿಯೊಬ್ಬನನ್ನು ವಜಾಗೊಳಿಸುವುದು ಅಗತ್ಯ ಎನ್ನುವುದು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಮನವರಿಕೆಯಾದರೆ, ವಿಚಾರಣೆ ನಡೆಸುವುದು ಅನಿವಾರ್ಯವಲ್ಲ” ಎಂದು ಈ ವಿಧಿ ಹೇಳುತ್ತದೆ.
ಸರಕಾರಿ ಉದ್ಯೋಗಿಗಳ ವಜಾ ವಿಷಯಕ್ಕೆ ಸಂಬಂಧಿಸಿ ತಾನು ಮುಖ್ಯಮಂತ್ರಿ ಅಬ್ದುಲ್ಲಾರಿಗೆ ಪತ್ರವೊಂದನ್ನು ಬರೆದಿದ್ದೇನೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮುಫ್ತಿ ಬರೆದಿದ್ದಾರೆ. ನಿರಂಕುಶವಾಗಿ ವಜಾಗೊಂಡಿರುವ ಉದ್ಯೋಗಿಗಳ ಕುಟುಂಬಗಳ ಬವಣೆಯನ್ನು ಅವರು ತನ್ನ ಸಂದೇಶದಲ್ಲಿ ವಿವರಿಸಿದ್ದಾರೆ ಹಾಗೂ ಅವರ ಸಂಕಷ್ಟಗಳನ್ನು ನಿವಾರಿಸಲು ಮಾನವೀಯ ನಿಲುವೊಂದನ್ನು ಅಬ್ದುಲ್ಲಾ ತಳೆಯುತ್ತಾರೆ ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ.
2023ರಲ್ಲಿ, ಉದ್ಯೋಗಿಗಳ ವಜಾಗಳನ್ನು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಮರ್ಥಿಸಿಕೊಂಡಿದ್ದರು. ಭಯೋತ್ಪಾದನೆಗೆ ನೆರವು ನೀಡುವ ಜನರಿಗೆ ಹಣ ಕೊಡಲು ಸರಕಾರವು ಸಿದ್ಧವಿಲ್ಲ ಎಂದು ಅವರು ಹೇಳಿದ್ದರು.