ಸೇನೆ ಕಸ್ಟಡಿಯಲ್ಲಿದ್ದ ನಾಗರಿಕರ ಸಾವು ಸಂಭವಿಸಿದ್ದ ಪೂಂಛ್ ಗೆ ನಿಗದಿತ ಭೇಟಿಗೆ ಮುನ್ನ ಮೆಹಬೂಬ ಮುಫ್ತಿಗೆ ಗೃಹಬಂಧನ: ಪಿಡಿಪಿ
ಮೆಹಬೂಬಾ ಮುಫ್ತಿ |Photo: PTI
ಶ್ರೀನಗರ: ಸೇನೆಯ ಕಸ್ಟಡಿಯಲ್ಲಿದ್ದ ಮೂವರು ನಾಗರಿಕರು ಮೃತಪಟ್ಟಿದ್ದ ಪೂಂಛ್ ಜಿಲ್ಲೆಯ ಸುರಾನಕೋಟ್ ಗೆ ನಿಗದಿತ ಭೇಟಿಗೆ ಮುನ್ನ ಪಕ್ಷಾಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿ ಸೋಮವಾರ ಹೇಳಿದೆ.
ಡಿ.21ರಂದು ಪೂಂಛ್ ಜಿಲ್ಲೆಯ ಸುರಾನಕೋಟ್ ಪ್ರದೇಶದಲ್ಲಿ ಸೇನಾವಾಹನಗಳ ಮೇಲೆ ಭಯೋತ್ಪಾದಕರು ನಡೆಸಿದ್ದ ಹೊಂಚುದಾಳಿಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದರು. ದಾಳಿಯ ಬಳಿಕ ಮೂವರು ನಾಗರಿಕರನ್ನು ವಿಚಾರಣೆಗಾಗಿ ಸೇನೆಯು ತನ್ನ ವಶಕ್ಕೆ ತೆಗೆದುಕೊಂಡಿತ್ತು ಎನ್ನಲಾಗಿದೆ. ಅವರ ಮೃತದೇಹಗಳು ಡಿ.22ರಂದು ಪತ್ತೆಯಾಗಿದ್ದವು.
“ಮೆಹಬೂಬಾ ತನ್ನ ನಿಗದಿತ ಸುರಾನಕೋಟ್ ಭೇಟಿ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಉದ್ದೇಶಿಸಿದ್ದರು. ಆದರೆ ಭೇಟಿಗೆ ಮುನ್ನವೇ ಅವರನ್ನು ಬಲವಂತದಿಂದ ಗೃಹಬಂಧನದಲ್ಲಿ ಇರಿಸಲಾಗಿದೆ” ಎಂದು ಪಿಡಿಪಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
“ಪಕ್ಷಾಧ್ಯಕ್ಷೆಯ ಗೃಹಬಂಧನವನ್ನು ಪಿಡಿಪಿ ತೀಕ್ಷ್ಣವಾಗಿ ಖಂಡಿಸುತ್ತದೆ. ಇದು ಅನಗತ್ಯವಾಗಿತ್ತು. ನಾವಿದನ್ನು ಬಲವಾಗಿ ವಿರೋಧಿಸುತ್ತೇವೆ” ಎಂದೂ ಪಕ್ಷವು ಹೇಳಿದೆ.
ಹೊಂಚುದಾಳಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹೆಚ್ಚಿನ ಯುವಜನರನ್ನು ಅವರ ಕುಟುಂಬಗಳಿಗೆ ಮಾಹಿತಿಯನ್ನು ನೀಡದೇ ಬಂಧಿಸುತ್ತಿವೆ. ಹೀಗಾಗಿ ಮಧ್ಯಪ್ರವೇಶಿಸುವಂತೆ ಮೆಹಬೂಬಾ ರವಿವಾರ ಎಕ್ಸ್ ಪೋಸ್ಟ್ ನಲ್ಲಿ ಲೆ.ಗ.ಮನೋಜ ಸಿನ್ಹಾ ಅವರನ್ನು ಆಗ್ರಹಿಸಿದ್ದರು.