ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ "ಘನತೆ, ಗೌರವ ಇದೆ": ಕೇರಳ ಹೈಕೋರ್ಟ್
Photo | PTI
ಕೇರಳ: ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಘನತೆ ಮತ್ತು ಗೌರವ ಇದೆ ಎಂದು ನಿರ್ದೇಶಕ ಬಾಲಚಂದ್ರ ಮೆನನ್ ಅವರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ವೇಳೆ ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಸೆಪ್ಟೆಂಬರ್ ನಲ್ಲಿ ನಿರ್ದೇಶಕ ಬಾಲಚಂದ್ರ ಮೆನನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಟ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುವ ವೇಳೆ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರು ಈ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
2007ರಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಲಾಗಿದ್ದರೂ 17 ವರ್ಷಗಳ ನಂತರ ದೂರು ನೀಡಲಾಗಿದೆ ಮತ್ತು ಮೆನನ್ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ದೂರು ನೀಡಲಾಗಿದೆ ಎಂದು ಕೋರ್ಟ್ ನಲ್ಲಿ ವಾದಿಸಲಾಗಿದೆ.
"ಮಹಿಳೆಯೊಬ್ಬರ ಹೇಳಿಕೆ ಆಧರಿಸಿ 17 ವರ್ಷಗಳ ನಂತರ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿರುವುದು ನಿಜ. ಆದರೆ ಗೌರವ, ಘನತೆ ಹೆಣ್ಣಿಗಷ್ಟೇ ಅಲ್ಲ, ಪುರುಷರಿಗೆ ಕೂಡ ಇದೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕುʼ ಎಂದು ನ್ಯಾಯಮೂರ್ತಿ ಕುಂಞಿಕೃಷ್ಣನ್ ಹೇಳಿದ್ದು, ನ್ಯಾಯದ ಹಿತದೃಷ್ಠಿಯಿಂದ ಅರ್ಜಿದಾರರಿಗೆ ಜಾಮೀನು ನೀಡುವುದು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.