ಮಹಿಳೆಯರಿಗೆ ಮುಟ್ಟಿನ ರಜೆ | ನೀತಿ ರಚಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಮಹಿಳಾ ಉದ್ಯೋಗಿಗಳ ಮುಟ್ಟಿನ ರಜೆ ಕುರಿತು ಮಾದರಿ ನೀತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಈ ಕುರಿತು ರಾಜ್ಯಗಳ ಜೊತೆ ಸಮಾಲೋಚನೆ ನಡೆಸುವಂತೆಯೂ ಸೂಚನೆ ನೀಡಿದೆ. ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಕಡ್ಡಾಯ ರಜೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವು ಈ ನಿರ್ದೇಶ ನೀಡಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಇದು ನೀತಿಗೆ ಸಂಬಂಧಿಸಿದ ವಿಷಯವಾಗಿದ್ದು, ನ್ಯಾಯಾಲಯಗಳು ಪರಿಶೀಲನೆ ನಡೆಸುವುದಲ್ಲ. ಮುಟ್ಟಿನ ಕಡ್ಡಾಯ ರಜೆ ನೀಡುವಂತೆ ನ್ಯಾಯಾಲಯದಿಂದ ಆದೇಶ ನೀಡಿದರೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಉದ್ಯೋಗದಾತರು ಮಹಿಳಾ ಉದ್ಯೋಗಿಗಳನ್ನು ನೇಮಕಾತಿಯಲ್ಲಿ ಕಡೆಗಣಿಸುವ ಸಾಧ್ಯತೆ ಉಂಟಾಗಬಹುದು. ಇದು ನಮಗೆ ಬೇಕಿಲ್ಲ ಎಂದು ಹೇಳಿದೆ.
‘ಅರ್ಜಿದಾರರಿಗೆ ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಕಾರ್ಯದರ್ಶಿಗೆ ನ್ಯಾಯಲಯ ಮನವಿ ಮಾಡುತ್ತದೆ. ಜೊತೆಗೆ, ಸಂಬಂಧಪಟ್ಟವರ ಜೊತೆ ಚರ್ಚಿಸಿ ನೀತಿ ರೂಪಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.