2024ರ ಭಾರತದ ಸಾರ್ವತ್ರಿಕ ಚುನಾವಣೆ ಕುರಿತ ಝುಕರ್ ಬರ್ಗ್ ಹೇಳಿಕೆ : ಕ್ಷಮೆಯಾಚಿಸಿದ ಮೆಟಾ
ಮಾರ್ಕ್ ಝುಕರ್ ಬರ್ಗ್ (Photo: PTI)
ಹೊಸದಿಲ್ಲಿ: ಭಾರತದಲ್ಲಿ ಅಧಿಕಾರದಲ್ಲಿರುವ ಸರ್ಕಾರವು 2024ರ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಂಡಿದೆ ಎಂಬ ಮಾರ್ಕ್ ಝುಕರ್ ಬರ್ಗ್ ಅವರ ಹೇಳಿಕೆಗೆ ಮೆಟಾ ಇಂಡಿಯಾ ಬುಧವಾರ ಕ್ಷಮೆಯಾಚಿಸಿದ್ದು, ಇದನ್ನು ಉದ್ದೇಶಪೂರ್ವಕವಲ್ಲದ ಹೇಳಿಕೆ, ಅಚಾತುರ್ಯದಿಂದಾದ ಲೋಪ ಎಂದು ಹೇಳಿದೆ.
ಜನವರಿ 10ರಂದು ಪಾಡ್ ಕ್ಯಾಸ್ಟ್ ಸಂದರ್ಶನದಲ್ಲಿ ಮಾತನಾಡಿದ್ದ ಫೇಸ್ಬುಕ್ ಸಹ-ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್, ಕೋವಿಡ್ ಸಾಂಕ್ರಾಮಿಕವು ವಿಶ್ವದಾದ್ಯಂತ ಅಧಿಕಾರದಲ್ಲಿರುವ ಸರ್ಕಾರಗಳ ಮೇಲಿನ ನಂಬಿಕೆ ಕೆಳೆದುಕೊಳ್ಳಲು ಕಾರಣವಾಗಿದೆ. ಅವರು ಭಾರತದ ಉದಾಹರಣೆಯನ್ನು ಉಲ್ಲೇಖಿಸಿದ್ದು, 2024 ಪ್ರಪಂಚದಾದ್ಯಂತ ಬಹಳ ದೊಡ್ಡ ಚುನಾವಣಾ ವರ್ಷವಾಗಿತ್ತು, ಭಾರತದಲ್ಲಿ ಚುನಾವಣೆಗಳು ನಡೆದಿತ್ತು. ಅಧಿಕಾರದಲ್ಲಿರುವವರು ಪ್ರತಿಯೊಂದು ಕಡೆಯೂ ಸೋತರು. ಇದು ಒಂದು ರೀತಿಯ ಜಾಗತಿಕ ವಿದ್ಯಮಾನವಿದೆ, ಅದು ಹಣದುಬ್ಬರ ಅಥವಾ ಕೋವಿಡ್ ಅನ್ನು ಎದುರಿಸಲು ಆರ್ಥಿಕ ನೀತಿಗಳು ಅಥವಾ ಸರ್ಕಾರಗಳು ಕೋವಿಡ್ ಅನ್ನು ಹೇಗೆ ನಿಭಾಯಿಸಿದವು ಎಂಬ ಕಾರಣದಿಂದಾಗಿರಬಹುದು. ಇದು ಜಾಗತಿಕವಾಗಿ ಈ ಪರಿಣಾಮ ಬೀರಿದೆ ಎಂದು ತೋರುತ್ತದೆ ಎಂದು ಝುಕರ್ ಬರ್ಗ್ ಹೇಳಿದ್ದರು.
ಬಿಜೆಪಿ ಸಂಸದ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಈ ಕುರಿತು ಪ್ರತಿಕ್ರಿಯಿಸಿ ತಪ್ಪು ಮಾಹಿತಿ ಹರಡಿದ ಮಾರ್ಕ್ ಝುಕರ್ ಬರ್ಗ್ ಗೆ ಸಮನ್ಸ್ ನೀಡಲಾಗುವುದು. ಪ್ರಜಾಪ್ರಭುತ್ವ ದೇಶ ಭಾರತದ ಬಗ್ಗೆ ತಪ್ಪು ಮಾಹಿತಿ ನೀಡುವುದರಿಂದ ದೇಶದ ಘನತೆಗೆ ಧಕ್ಕೆಯಾಗಲಿದೆ. ಈ ತಪ್ಪಿಗಾಗಿ ಮೆಟಾ ಸಂಸ್ಥೆಯು ಸಂಸತ್ತಿನಲ್ಲಿ ಮತ್ತು ಭಾರತೀಯರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಮೆಟಾ ಕ್ಷಮೆಯಾಚಿಸಿದೆ.