ಉತ್ತರ ಪ್ರದೇಶದ ವಲಸೆ ಕಾರ್ಮಿಕ ಕಾಶ್ಮೀರದಲ್ಲಿ ಗುಂಡಿನ ದಾಳಿಗೆ ಬಲಿ
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತುಮ್ಚಿ ನೌಪುರ ಎಂಬಲ್ಲಿ ಸೋಮವಾರ ಸಂಜೆ ಉತ್ತರ ಪ್ರದೇಶದ ವಲಸೆ ಕಾರ್ಮಿಕರೊಬ್ಬರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಉನ್ನಾವೊ ಜಿಲ್ಲೆಯ ಭತ್ಪುರ ಗ್ರಾಮದ ಮುಕೇಶ್ ಕುಮಾರ್ (38) ಎಂದು ಗುರುತಿಸಲಾಗಿದೆ.
ಇನ್ಸ್ಪೆಕ್ಟರ್ ಮಸ್ರೂರ್ ಅಹ್ಮದ್ ವಾನಿ ಎಂಬುವವರು ತಮ್ಮ ಸ್ನೇಹಿತರ ಜತೆ ಶ್ರೀನಗರದ ಈದ್ಗಾ ಮೈದಾನದಲ್ಲಿ ಭಾನುವಾರ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ದಾಳಿಕೋರನೊಬ್ಬ ಗುಂಡು ಹಾರಿಸಿ, ಇನ್ಸ್ಪೆಕ್ಟರ್ ಅವರನ್ನು ತೀವ್ರವಾಗಿ ಗಾಯಗೊಳಿಸಿದ ಬೆನ್ನಲ್ಲೇ ಈ ಹತ್ಯೆ ನಡೆದಿದೆ.
ಮುಕೇಶ್ ಕುಮಾರ್ ಕೆಲಸ ಮಾಡುತ್ತಿದ್ದ ಇಟ್ಟಿಗೆ ತಯಾರಿಸುವ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟರ್ ಬೈಕ್ ನಲ್ಲಿ ಬಂದ ಇಬ್ಬರು ಕುಮಾರ್ ಮೇಲೆ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. ತಕ್ಷಣವೇ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ದಾಳಿಕೋರರು ವಲಸೆ ಕಾರ್ಮಿಕರಂಥ ಸುಲಭವಾಗಿ ಸಿಗುವವರನ್ನು ಗುರಿ ಮಾಡುತ್ತಿದ್ದಾರೆ. ಸೋಮವಾರದ ಗುಂಡಿನ ದಾಳಿ ಸೇರಿದಂತೆ ಈ ವರ್ಷ ನಡೆದ ನಾಲ್ಕನೇ ಘಟನೆ ಇದಾಗಿದೆ. ಕಳೆದ ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ಎಟಿಎಂ ಗಾರ್ಡ್ ಸಂಜಯ್ ಶರ್ಮಾ ಎಂಬುವವರನ್ನು ಹತ್ಯೆ ಮಾಡಿದ್ದರೆ, ಅನಂತನಾಗ್ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಸರ್ಕಸ್ ಕಂಪನಿ ನೌಕರರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಜುಲೈನಲ್ಲಿ ಬಿಹಾರದ ಕೂಲಿಕಾರ್ಮಿಕರೊಬ್ಬರು ಉಗ್ರ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಘಟನೆ ಶೋಪಿಯಾನ್ ಜಿಲ್ಲೆಯಲ್ಲಿ ವರದಿಯಾಗಿತ್ತು.
Militants shot dead non-local labourer Mukesh Kumar from UP on Monday afternoon in Nowpora Parigam village in Newa area of south Kashmir’s Pulwama district pic.twitter.com/bbS4DdHCTE
— The Unique (@theunique24x7) October 30, 2023