ಎರ್ನಾಕುಳಂನಲ್ಲಿ ವಲಸಿಗ ಕಾರ್ಮಿಕನನ್ನು ಥಳಿಸಿ ಹತ್ಯೆಗೈದ ಗುಂಪು
ಎರ್ನಾಕುಳಂ: ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಅರುಣಾಚಲ ಪ್ರದೇಶದ ವಲಸಿಗ ಕಾರ್ಮಿಕನೊಬ್ಬನನ್ನು ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆ ಸಂಬಂಧ ಪೊಲೀಸರು ಹತ್ತು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಮುವಟ್ಪುಪುಝ ಸಮೀಪದ ವಳಕೊಂ ಎಂಬಲ್ಲಿನ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ 24 ವರ್ಷದ ಅಶೋಕದಾಸ್ ಎಂಬಾತ ಗುರುವಾರ ಸಂಜೆ ತನ್ನ ಮಹಿಳಾ ಸಹೋದ್ಯೋಗಿಯನ್ನು ಭೇಟಿಯಾಗಲು ಆಕೆಯ ಬಾಡಿಗೆ ಮನೆಗೆ ತೆರಳಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಗುಂಪೊಂದು ತೀವ್ರವಾಗಿ ಥಳಿಸಿತ್ತು ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಸಹೋದ್ಯೋಗಿಯ ಮನೆಯಿಂದ ವಾಪಸಾಗುತ್ತಿದ್ದಾಗ ತಡೆದ ಗುಂಪು ಅಶೋಕ್ ದಾಸ್ ರನ್ನು ಪ್ರಶ್ನಿಸಲಾರಂಭಿಸಿತ್ತು. ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಿಡಿದ ಗುಂಪು ಕಬ್ಬಿಣದ ಕಂಬವೊಂದಕ್ಕೆ ಕಟ್ಟಿ ಹಾಕಿ ಬರ್ಬರವಾಗಿ ಥಳಿಸಿತ್ತು ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಅಶೋಕದಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.
ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮಹಿಳಾ ಸಹೋದ್ಯೋಗಿಯೂ ಅಶೋಕ್ ದಾಸ್ ಬಗ್ಗೆ ಯಾವುದೇ ದೂರು ನೀಡಿಲ್ಲ ಎನ್ನಲಾಗಿದೆ.