ಎಸ್ಸಿ,ಎಸ್ಟಿ ಮೀಸಲಾತಿಗೆ ಕೆನೆಪದರ ಅನ್ವಯಿಸುವುದಕ್ಕೆ ಸಚಿವ ಅಠವಳೆ ವಿರೋಧ
ರಾಮದಾಸ್ ಅಠವಳೆ | PC : PTI
ಮುಂಬೈ: ಪರಿಶಿಷ್ಟ ಜಾತಿಗಳು (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ(ಎಸ್ಟಿ)ಗಳ ಮೀಸಲಾತಿಗೆ ‘‘ಕೆನೆಪದರ’’ವನ್ನು ಅನ್ವಯಿಸುವ ಯಾವುದೇ ನಡೆಯನ್ನು ತಾನು ವಿರೋಧಿಸುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವರಾದ ರಾಮದಾಸ್ ಅಠವಳೆ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೆ ಸಂಬಂಧಿಸಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
‘‘ಎಸ್ಸಿ, ಎಸ್ಟಿ ಮೀಸಲಾತಿಯು ಜಾತಿ ಆಧಾರಿತವಾದುದು. ಭಾರತೀಯ ರಿಪಬ್ಲಿಕನ್ ಪಾರ್ಟಿ (ಅಠವಳೆ)ಯು ಎಸ್ಸಿ ಹಾಗೂ ಎಸ್ಟಿ ಮೀಸಲಾತಿಗೆ ಕೆನೆಪದರದ ಮಾನದಂಡವನ್ನು ಅನ್ವಯಿಸುವ ಯಾವುದೇ ನಡೆಯನ್ನು ವಿರೋಧಿಸುತ್ತದೆಯೆಂದು ಅವರು ಹೇಳಿದರು. ಆದರೆ ಒಳಮೀಸಲಾತಿಗಾಗಿ ಎಸ್ಸಿ,ಎಸ್ಟಿ ಪಂಗಡಗಳನ್ನು ಉಪವರ್ಗೀಕರಿಸುವ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಬೆಂಬಲಿಸುವುದಾಗಿ ಅಠವಳೆ ಹೇಳಿದ್ದಾರೆ. ಇದೇ ರೀತಿ ಇತರ ಹಿಂದುಳಿದ ವರ್ಗಗಳು (ಓಬಿಸಿ) ಹಾಗೂ ಸಾಮಾನ್ಯ ಶ್ರೇಣಿಯ ಜಾತಿಗಳನ್ನೂ ಉಪವರ್ಗೀಕರಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಆರ್ಪಿಐ ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಅಂಗಪಕ್ಷವಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ಏಳು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಗುರುವಾರ 6 : 1 ಬಹುಮತದೊಂದಿಗೆ ನೀಡಿದ ತೀರ್ಪಿನಲ್ಲಿ ಅತ್ಯಂತ ದುರ್ಬಲಜಾತಿಗಳಿಗೆ ಮೀಸಲಾತಿ ದೊರೆಯುವುದನ್ನು ಖಾತರಿಪಡಿಸುವುದಕ್ಕಾಗಿ ಎಸ್ಸಿ, ಎಸ್ಟಿ ಸಮುದಾಯಗಳನ್ನು ಉಪವರ್ಗೀಕರಿಸಬಹುದಾಗಿದೆ ಎಂದು ಹೇಳಿತ್ತು. ಆರು ಮಂದಿ ನ್ಯಾಯಾಧೀಶರ ಪೈಕಿ ನಾಲ್ಕು ಮಂದಿ ಮೀಸಲಾತಿಯ ಸವಲತ್ತುಗಳಿಂದ ಕೆನೆಪದರವನ್ನು ಹೊರಗಿಡಬೇಕೆಂದು ಸೂಚಿಸುವ ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದರು.