ಮಹಾರಾಷ್ಟ್ರ ರಾಜಕೀಯ | ಅಚ್ಚರಿಯ ಹೇಳಿಕೆ ನೀಡಿದ ಶಿಂಧೆ ಬಣದ ಸಚಿವ !
ಫೋಟೋ: timesofindia.indiatimes.com
ಮುಂಬೈ: ಅಜಿತ್ ಪವಾರ್ ಹಾಗೂ ಇತರ ಎಂಟು ಮಂದಿ ಶಾಸಕರನ್ನು ಶಿಂಧೆ- ಫಡ್ನವೀಸ್ ನೇತೃತ್ವದ ಸರ್ಕಾರಕ್ಕೆ ಸೇರಿಸಿಕೊಂಡ ಬೆನ್ನಲ್ಲೇ, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ತಮ್ಮನ್ನು ಸಂಪರ್ಕಿಸಿದಲ್ಲಿ ಮುಖ್ಯಮಂತ್ರಿಗಳ ನೇತೃತ್ವದ ಇಡೀ ಗುಂಪು ಧನಾತ್ಮಕವಾಗಿ ಸ್ಪಂದಿಸಲಿದೆ ಎಂದು ಶಿಂಧೆ ಬಣದ ಸಚಿವ ಶಂಭುಜ್ರಾಜೇ ದೇಸಾಯಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಎನ್ಸಿಪಿಯನ್ನು ಸರ್ಕಾರಕ್ಕೆ ಸೇರಿಸಿಕೊಂಡ ಬಗ್ಗೆ ಶಿಂಧೆ ಬಣದ ಇಬ್ಬರು ಶಾಸಕರು ಕೂಡಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಸೇನೆ-ಬಿಜೆಪಿ ಸರ್ಕಾರಕ್ಕೆ 172 ಶಾಸಕರ ಬೆಂಬಲ ಇರುವಾಗ, ಎನ್ಸಿಪಿಯನ್ನು ಸೇರಿಸಿಕೊಳ್ಳುವ ಅಗತ್ಯ ಏನಿತ್ತು ಎಂದು ಸಂಜಯ್ ಶೀರ್ಶತ್ ಪ್ರಶ್ನಿಸಿದ್ದಾರೆ. ಆದರೆ ಕೆಲವೊಮ್ಮೆ ಹೊಸ ಸೇರ್ಪಡೆ ಮಾಡಿಕೊಳ್ಳಬೇಕಾಗುತ್ತದೆ, ಆದರೆ ಎಲ್ಲವನ್ನೂ ತ್ಯಜಿಸಿದ ಬಳಿಕ ಅಧಿಕಾರದಲ್ಲಿ ಮುಂದುವರಿಯುವಲ್ಲಿ ಏನು ಅರ್ಥವಿದೆ ಎಂದು ಅವರು ಪ್ರಶ್ನಿಸಿದರು.
ಒಂದು ಬ್ರೆಡ್ನ ಬದಲು ಇದೀಗ ಪ್ರತಿಯೊಬ್ಬರಿಗೂ (ಶಿವಸೇನೆ ಶಾಸಕರು) ಅರ್ಧ ಬ್ರೆಡ್ ಮಾತ್ರ ಸಿಗುತ್ತಿದೆ ಎಂದು ಮತ್ತೊಬ್ಬ ಶಾಸಕ ಭರತ್ ಗೊಗವಾಲೆ ಹೇಳಿದ್ದಾರೆ.
ರಾಷ್ಟ್ರಪತಿ ಸ್ವಾಗತಕ್ಕಾಗಿ ಮಂಗಳವಾರ ರಾತ್ರಿ ನಾಗ್ಪುರಕ್ಕೆ ತೆರಳಿರುವ ಸಿಎಂ ಶಿಂಧೆ, ರಾತ್ರಿ ಅಲ್ಲಿಯೇ ಉಳಿಯಬೇಕಿತ್ತು. ಬುಧವಾರ ಸಂಜೆ ಏಕನಾಥ್ ಶಿಂಧೆ ಅಧಿಕೃತ ನಿವಾಸ 'ವರ್ಷಾ'ದಲ್ಲಿ ಪಕ್ಷದ ಎಲ್ಲ ಸಂಸದರು ಹಾಗೂ ಶಾಸಕರ ಸಭೆ ಕರೆದಿದ್ದಾಗಿ ಮೂಲಗಳು ಹೇಳಿವೆ. ಮುಂಬೈಗೆ ಅವರು ವಾಪಸ್ಸಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಸೂಚಕ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಹಲವು ಮಂದಿ ಶಿವಸೇನಾ ಶಾಸಕರು ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದರು.