ಮುರಿದ ಆಸನ ಒದಗಿಸಿದ್ದ ಏರ್ ಇಂಡಿಯಾ ವಿರುದ್ಧ ಕೇಂದ್ರ ಸಚಿವ ಶಿವರಾಜ್ ಚೌಹಾಣ್ ಅಸಮಾಧಾನ
ಕ್ಷಮೆಯಾಚಿಸಿದ ವಿಮಾನ ಯಾನ ಸಂಸ್ಥೆ

ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ (Photo: PTI)
ಹೊಸದಿಲ್ಲಿ: ಕೇಂದ್ರ ಕೃಷಿ ಸಚಿವ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ ಶಿವರಾಜ್ ಚೌಹಾಣ್ ಗೆ ಪ್ರಯಾಣದ ವೇಳೆ ಮುರಿದ ಆಸನ ಒದಗಿಸಿದ್ದ ಆರೋಪಕ್ಕೆ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಗುರಿಯಾಗಿದ್ದು, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಸೇವೆಯ ಗುಣಮಟ್ಟದ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳಪೆ ಆಸನ ವ್ಯವಸ್ಥೆ ಹಾಗೂ ಪ್ರಯಾಣಿಕರಿಗಾಗುತ್ತಿರುವ ಅನಾನುಕೂಲತೆ ಕುರಿತು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿರುವ ಅವರು, ಎಕ್ಸ್ ನಲ್ಲಿ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ.
“ಇಂದು ನಾನು ಪೂಸಾದಲ್ಲಿ ಕಿಸಾನ್ ಮೇಳವನ್ನು ಉದ್ಘಾಟಿಸಲು, ಕುರುಕ್ಷೇತ್ರದಲ್ಲಿ ನೈಸರ್ಗಿಕ ಕೃಷಿ ಯೋಜನೆ ಕುರಿತು ಸಭೆ ನಡೆಸಲು ಹಾಗೂ ಚಂಡೀಗಢದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಭೋಪಾಲ್ ನಿಂದ ದಿಲ್ಲಿಗೆ ಆಗಮಿಸಬೇಕಾಯಿತು. ಅದಕ್ಕಾಗಿ ನಾನು ಏರ್ ಇಂಡಿಯಾ ವಿಮಾನ ಸಂಖ್ಯೆ ಎಐ436ನಲ್ಲಿ ಟಿಕೆಟ್ ಕಾಯ್ದಿರಿಸಿದ್ದೆ ಹಾಗೂ ನನಗೆ ಆಸನ ಸಂಖ್ಯೆ 8ಸಿಯನ್ನು ಮಂಜೂರು ಮಾಡಲಾಗಿತ್ತು. ಆ ಆಸನ ಮುರಿದು ಹೋಗಿತ್ತು ಹಾಗೂ ನಾನದರಲ್ಲಿ ಹೂತು ಹೋದೆ. ಅದು ಕುಳಿತುಕೊಳ್ಳಲು ತುಂಬಾ ಅನಾನುಕೂಲವಾಗಿತ್ತು” ಎಂದು ಪೋಸ್ಟ್ ಮಾಡಿದ್ದಾರೆ.
“ಈ ಆಸನ ಇಷ್ಟು ಕೆಟ್ಟದಾಗಿರುವಾಗ ಇದನ್ನೇಕೆ ನನಗೆ ನೀಡಿದ್ದೀರಿ ಎಂದು ನಾನು ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳನ್ನು ಪ್ರಶ್ನಿಸಿದಾಗ, ಈ ಆಸನ ಉತ್ತಮವಾಗಿಲ್ಲ ಹಾಗೂ ಈ ಆಸನದ ಟಿಕೆಟ್ ಅನ್ನು ಮಾರಾಟ ಮಾಡಬಾರದು ಎಂದು ನಾವು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದೆವು ಎಂದು ಅವರು ಉತ್ತರಿಸಿದರು. ಕೇವಲ ಒಂದು ಆಸನ ಮಾತ್ರ ಕೆಟ್ಟದಾಗಿರಲಿಲ್ಲ, ಇನ್ನೂ ಹಲವು ಆಸನಗಳು ಅದೇ ಸ್ಥಿತಿಯಲ್ಲಿದ್ದವು. ನನ್ನ ಸಹ ಪ್ರಯಾಣಿಕರು ನನ್ನ ಆಸನವನ್ನು ಬದಲಿಸಿ, ಉತ್ತಮ ಆಸನದಲ್ಲಿ ಕೂರುವಂತೆ ನನಗೆ ಮನವಿ ಮಾಡಿದರು. ಆದರೆ, ನನ್ನ ಒಳಿತಿಗಾಗಿ ನಾನು ಮತ್ತೊಬ್ಬ ಗೆಳೆಯನಿಗೇಕೆ ತೊಂದರೆ ಕೊಡಲಿ? ಹೀಗಾಗಿ ನಾನು ನನ್ನ ಪ್ರಯಾಣವನ್ನು ಅದೇ ಆಸನದಲ್ಲಿ ಮುಕ್ತಾಯಗೊಳಿಸಲು ನಿರ್ಧರಿಸಿದೆ” ಎಂದು ತಾನು ವಿಮಾನಯಾನ ಸಿಬ್ಬಂದಿಗಳೊಂದಿಗೆ ನಡೆಸಿದ ಮಾತುಕತೆಯನ್ನು ಅವರು ಹಂಚಿಕೊಂಡಿದ್ದಾರೆ.
ತಮ್ಮ ಪೋಸ್ಟ್ ನಲ್ಲಿ ಏರ್ ಇಂಡಿಯಾದ ಸೇವಾ ಗುಣಮಟ್ಟದ ಕುರಿತೂ ಪ್ರಶ್ನಿದಸಿರುವ ಅವರು, “ಟಾಟಾ ಆಡಳಿತ ಮಂಡಳಿಯು ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿದ ನಂತರ, ಅದರ ಸೇವಾ ಗುಣಮಟ್ಟ ಸುಧಾರಿಸಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ, ಇದು ತಪ್ಪು ತಿಳುವಳಿಕೆ ಎಂದು ಮನವರಿಕೆಯಾಯಿತು. ಆರಾಮದಾಯಕತೆ ಇಲ್ಲದೆ ಕುಳಿತುಕೊಳ್ಳಲು ನನಗೇನೂ ತೊಂದರೆಯಿಲ್ಲ. ಆದರೆ, ಪ್ರಯಾಣಿಕರಿಗೆ ಸಂಪೂರ್ಣ ಶುಲ್ಕವನ್ನು ವಿಧಿಸಿದ ನಂತರ, ಕೆಟ್ಟ ಹಾಗೂ ಆರಾಮದಾಯಕವಲ್ಲದ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಮಾಡುವುದು ಅನೈತಿಕ. ಇದು ಪ್ರಯಾಣಿಕರಿಗೆ ಎಸಗುವ ವಂಚನೆಯಲ್ಲವೆ?” ಎಂದು ಪ್ರಶ್ನಿಸಿದ್ದಾರೆ.
ದೋಷ ಪರಿಹಾರ ಕ್ರಮಕ್ಕೆ ಆಗ್ರಹಿಸಿರುವ ಅವರು, “ಭವಿಷ್ಯದಲ್ಲಿ ಪ್ರಯಾಣಿಕರು ಇಂತಹ ಅನಾನುಕೂಲತೆ ಎದುರಿಸದಂತೆ ಖಾತರಿಪಡಿಸಲು ಏರ್ ಇಂಡಿಯಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವುದೆ ಅಥವಾ ತಮ್ಮ ಗಮ್ಯವನ್ನು ಮುಂಚಿತವಾಗಿ ತಲುಪಬೇಕಾದ ಪ್ರಯಾಣಿಕರ ಅನಿವಾರ್ಯತೆಯ ಲಾಭ ಪಡೆಯುವುದನ್ನು ಮುಂದುವರಿಸಲಿದೆಯೆ?” ಎಂದು ಚಾಟಿ ಬೀಸಿದ್ದಾರೆ.
ಸಚಿವರ ಪೋಸ್ಟ್ ಗೆ ಪ್ರತಿಯಾಗಿ ಎಕ್ಸ್ ನಲ್ಲಿ ಕ್ಷಮೆಯನ್ನು ಕೋರಿರುವ ಏರ್ ಇಂಡಿಯಾ, “ನಾವು ಆಗಿರುವ ಅನನುಕೂಲತೆಗೆ ಕ್ಷಮೆ ಯಾಚಿಸುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ನಾವು ಈ ವಿಷಯವನ್ನು ಜಾಗರೂಕವಾಗಿ ಪರಿಶೀಲಿಸಲಿದ್ದೇವೆ ಎಂದು ನಿಮಗೆ ಭರವಸೆ ನೀಡುತ್ತೇವೆ” ಎಂದು ಹೇಳಿದೆ.
आज मुझे भोपाल से दिल्ली आना था, पूसा में किसान मेले का उद्घाटन, कुरुक्षेत्र में प्राकृतिक खेती मिशन की बैठक और चंडीगढ़ में किसान संगठन के माननीय प्रतिनिधियों से चर्चा करनी है।
— Shivraj Singh Chouhan (@ChouhanShivraj) February 22, 2025
मैंने एयर इंडिया की फ्लाइट क्रमांक AI436 में टिकिट करवाया था, मुझे सीट क्रमांक 8C आवंटित हुई। मैं जाकर…