ದೀಪಾವಳಿಯೊಳಗೆ ಒಆರ್ಒಪಿ ಪಿಂಚಣಿ ಪಾವತಿಗೆ ರಕ್ಷಣಾ ಸಚಿವಾಲಯ ಸೂಚನೆ
ರಕ್ಷಣಾ ಸಚಿವ ರಾಜನಾಥ ಸಿಂಗ್ Photo- PTI
ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರಕ್ಷಣಾ ಪಿಂಚಣಿದಾರರಿಗೆ ‘ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ಒಪಿ) ’ ಯೋಜನೆಯಡಿ ಮೂರನೇ ಕಂತಿನ ಬಾಕಿಯನ್ನು ದೀಪಾವಳಿಗೆ ಮುನ್ನ ಬಿಡುಗಡೆಗೊಳಿಸುವಂತೆ ಗುರುವಾರ ನಿರ್ದೇಶನವನ್ನು ಹೊರಡಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಸರಕಾರವು ಒಆರ್ಒಪಿ ಯೋಜನೆಯಡಿ 2019, ಜು.1ರಿಂದ ಅನ್ವಯವಾಗುವಂತೆ ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಪಿಂಚಣಿಯ ಪರಿಷ್ಕರಣೆಗೆ ಅನುಮತಿಯನ್ನು ನೀಡಿತ್ತು. ಈ ಬಾಕಿಗಳನ್ನು ನಾಲ್ಕು ಕಂತುಗಳಲ್ಲಿ ಪಾವತಿಸಬೇಕಿತ್ತು.
2019 ಜೂ.30ರವರೆಗೆ ನಿವೃತ್ತರಾಗಿರುವ ರಕ್ಷಣಾ ಸಿಬ್ಬಂದಿಗಳು (ಅವಧಿಪೂರ್ವ ನಿವೃತ್ತರನ್ನು ಹೊರತುಪಡಿಸಿ) ಪರಿಷ್ಕರಣೆಯ ವ್ಯಾಪ್ತಿಗೊಳಪಟ್ಟಿದ್ದಾರೆ. 4.52 ಲ.ನೂತನ ಫಲಾನುಭವಿಗಳು ಸೇರಿದಂತೆ 25.13 ಲ.ಕ್ಕೂ ಅಧಿಕ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಪರಿಷ್ಕರಣೆಯ ಲಾಭವನ್ನು ಪಡೆಯಲಿದ್ದಾರೆ ಎಂದು ಕಳೆದ ವರ್ಷದ ಡಿಸೆಂಬರ್ನಲ್ಲಿ ಅಂದಾಜಿಸಲಾಗಿತ್ತು.
ಸರಕಾರವು ಒಆರ್ಒಪಿ ಯೋಜನೆಯ ಜಾರಿಯನ್ನು ಘೋಷಿಸಿ 2015ರಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ಪಿಂಚಣಿಗಳನ್ನು ಪುನರ್ಪರಿಶೀಲಿಸುವ ನಿಬಂಧನೆಯನ್ನು ಅದು ಒಳಗೊಂಡಿತ್ತು.