ಇ-ಸಿಗರೇಟು ಮಾರಾಟ ಮಾಡುತ್ತಿರುವ 15 ವೆಬ್ ಸೈಟ್ ಗಳಿಗೆ ಆರೋಗ್ಯ ಸಚಿವಾಲಯ ನೋಟಿಸ್
PC: freepik.com
ಹೊಸದಿಲ್ಲಿ: ಭಾರತದಲ್ಲಿ ನಿಷೇಧಿಸಲಾದ ಇ-ಸಿಗರೇಟುಗಳನ್ನು ಮಾರಾಟ ಮಾಡುತ್ತಿರುವ 15 ವೆಬ್ ಸೈಟ್ ಗಳಿಗೆ ನೋಟಿಸು ಜಾರಿಗೊಳಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಇ-ಸಿಗರೇಟ್ ನ ಮಾರಾಟ ಹಾಗೂ ಜಾಹೀರಾತು ನಿಲ್ಲಿಸುವಂತೆ ನಿರ್ದೇಶಿಸಿದೆ.
ಇನ್ನೂ ಆರು ವೆಬ್ಸೈಟ್ ಗಳು ನಿಗಾದಲ್ಲಿ ಇವೆ. ಸಾಮಾಜಿಕ ಮಾಧ್ಯಮದಲ್ಲಿ ಇ-ಸಿಗರೇಟು ಮಾರಾಟ, ಜಾಹೀರಾತಿನ ಬಗ್ಗೆ ಸಚಿವಾಲಯ ನಿಕಟ ನಿಗಾ ಇರಿಸಲಿದೆ ಹಾಗೂ ಕೂಡಲೇ ನೋಟೀಸು ನೀಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನೋಟಿಸು ನೀಡಲಾದ 15 ವೆಬ್ ಸೈಟ್ ಗಳಲ್ಲಿ 4 ಕಾರ್ಯಾಚರಣೆ ಸ್ಥಗಿತಗೊಳಿಸಿವೆ.
ಇತರ ವೆಬ್ ಸೈಟ್ ಗಳು ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಅವು ತಿಳಿಸಿವೆ. ‘‘ಒಂದು ವೇಳೆ ಅವು ಪ್ರತಿಕ್ರಿಯಿಸದೇ ಇದ್ದರೆ ಅಥವಾ ಕಾನೂನು ಅನುಸರಿಸದೇ ಇದ್ದರೆ, ಅಂತಹ ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸಲು ಆರೋಗ್ಯ ಸಚಿವಾಲಯ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆಯಲಿದೆ. ಈ ವೆಬ್ ಸೈಟ್ ಗಳ ವಿರುದ್ಧ ಕಾನೂನು ಕ್ರಮವನ್ನು ಕೂಡ ತೆಗೆದುಕೊಳ್ಳಲಾಗುವುದು’’ ಎಂದು ಮೂಲಗಳು ತಿಳಿಸಿವೆ.