ಉತ್ತರ ಪ್ರದೇಶ: ʼಜೈ ಶ್ರೀ ರಾಮ್ʼ ಘೋಷಣೆ ಕೂಗಲು ನಿರಾಕರಿಸಿದ ಬಾಲಕನ ಮೇಲೆ ಗಾಜಿನಿಂದ ಹಲ್ಲೆ ನಡೆಸಿದ ಗುಂಪು!

ಸಾಂದರ್ಭಿಕ ಚಿತ್ರ
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಲು ನಿರಾಕರಿಸಿದ ಅಪ್ರಾಪ್ತ ಮುಸ್ಲಿಂ ಬಾಲಕನ ಮೇಲೆ ಅಪ್ರಾಪ್ತರ ಗುಂಪೊಂದು ಗಾಜಿನಿಂದ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಕಾನ್ಪುರದ ಮಹಾರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಸೌಲ್ ಪ್ರದೇಶದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಬಾಲಕ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಆತನನ್ನು ತಡೆದು ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಅಪ್ತಾಪ್ತರ ಗುಂಪು ಆಗ್ರಹಿಸಿದೆ. ಇದಕ್ಕೆ ನಿರಾಕರಿಸಿದಾಗ ಬಾಲಕನ ಮೇಲೆ ಗಾಜಿನಿಂದ ಹಲ್ಲೆ ನಡೆಸಿರುವುದಲ್ಲದೆ ಆತನ ತೊಡೆಯ ಮೇಲೆ ಗಾಜಿನಿಂದ ಚುಚ್ಚಿದ್ದಾರೆ.
ʼಇದು ಮೊದಲಲ್ಲ, ಈ ಮೊದಲು ಕೂಡ ಇದೇ ರೀತಿ ಹಲ್ಲೆ ನಡೆಸಲಾಗಿದೆ. ಗುರುವಾರ ಸಂಜೆ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ನನ್ನನ್ನು ತಡೆದು ಜೈಶ್ರೀರಾಮ್ ಘೋಷಣೆ ಕೂಗುವಂತೆ ಆಗ್ರಹಿಸಿರುವುದಲ್ಲದೆ ಗಾಜಿನಿಂದ ಹಲ್ಲೆ ನಡೆಸಲಾಗಿದೆʼ ಎಂದು ಸಂತ್ರಸ್ತ ಬಾಲಕ ಆರೋಪಿಸಿದ್ದಾನೆ.
ಘಟನೆಯಲ್ಲಿ ಬಾಲಕನ ಎಡ ಕಾಲಿನ ಮೇಲೆ ಆಳವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸಂತ್ರಸ್ತ ಬಾಲಕನ ಕುಟುಂಬಸ್ಥರು ಮಹಾರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆರೋಪಿಗಳ ವಿರುದ್ಧ ಬಿಎನ್ಎಸ್ ಕಾಯಿದೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.