ಪ್ರಧಾನಿಯ ಭಾಷಣವನ್ನು ಟೀಕಿಸಿದ ಅಲ್ಪಸಂಖ್ಯಾತ ಮೋರ್ಚಾ ನಾಯಕ ಬಿಜೆಪಿಯಿಂದ ಉಚ್ಚಾಟನೆ
ನರೇಂದ್ರ ಮೋದಿ , ಉಸ್ಮಾನ್ ಘನಿ | PC : X
ಜೈಪುರ್: ರಾಜಸ್ಥಾನದ ಚುನಾವಣಾ ರ್ಯಾಲಿಯಲ್ಲಿ ಇತ್ತೀಚೆಗೆ ಪ್ರಧಾನಿ ನೀಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಸ್ಮಾನ್ ಘನಿ ಅವರನ್ನು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂಬ ಕಾರಣ ನೀಡಿ ಬುಧವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ.
ರಾಜಸ್ಥಾನದ ಒಟ್ಟು 25 ಕ್ಷೇತ್ರಗಳ ಪೈಕಿ ಬಿಜೆಪಿ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಸೋಲಲಿದೆ ಎಂದು ಅವರು ಹೊಸದಿಲ್ಲಿಯಲ್ಲಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಹೇಳಿದ್ದರಲ್ಲದೆ ಮುಸ್ಲಿಮರ ಕುರಿತಂತೆ ಪ್ರಧಾನಿ ರಾಜ್ಯದ ತಮ್ಮ ಚುನಾವಣಾ ರ್ಯಾಲಿಗಳಲ್ಲಿ ನೀಡಿದ ಹೇಳಿಕೆಗಳನ್ನು ಖಂಡಿಸಿದ್ದರು.
ಓರ್ವ ಮುಸ್ಲಿಮನಾಗಿ ತನಗೆ ಪ್ರಧಾನಿ ಹೇಳಿರುವುದು ನಿರಾಸೆ ಮೂಡಿಸಿದೆ, ಬಿಜೆಪಿಗೆ ಮತ ನೀಡಿ ಎಂದು ಮುಸ್ಲಿಮರ ಬಳಿ ಮತಯಾಚನೆಗೆ ಹೋದಾಗ ಸಮುದಾಯದ ಜನರು ಪ್ರಧಾನಿಯ ಹೇಳಿಕೆಗಳನ್ನು ಉಲ್ಲೇಖಿಸಿ ತಮ್ಮಿಂದ ಉತ್ತರಗಳನ್ನು ಬಯಸುತ್ತಾರೆ ಎಂದು ಅವರು ಹೇಳಿದ್ದರು.
ಅಷ್ಟೇ ಅಲ್ಲದೆ ರಾಜ್ಯದ ಜಾಟ್ ಸಮುದಾಯ ಬಿಜೆಪಿ ವಿರುದ್ಧ ಆಕ್ರೋಶ ಹೊಂದಿದೆ ಮತ್ತು ಚುರು ಹಾಗೂ ಇತರ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದೆ ಎಂದು ಅವರು ಹೇಳಿದ್ದರು. ತಾವು ಹೇಳಿದ್ದಕ್ಕೆ ಪಕ್ಷ ತಮ್ಮ ವಿರುದ್ಧ ಕ್ರಮಕೈಗೊಂಡರೆ ತಮಗೆ ಭಯವಿಲ್ಲ ಎಂದೂ ಅವರು ಹೇಳಿದ್ದರು.
ಅವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದಾಗ ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಕಳಾವತ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡರು.