18.6 ಕೋಟಿ ರೂ.ಸರಕಾರಿ ಅನುದಾನಗಳ ದುರ್ಬಳಕೆ ಹಗರಣ ; ಗುಜರಾತಿನ ಮಾಜಿ ಐಎಎಸ್ ಅಧಿಕಾರಿ ಬಂಧನ
ಸಾಂದರ್ಭಿಕ ಚಿತ್ರ | Photo: NDTV
ದಾಹೋದ್(ಗುಜರಾತ್): ವಂಚಕ ಜಾಲವೊಂದರ ಆರೋಪಿಗಳು ನಡೆಸುತ್ತಿದ್ದ ಆರು ನಕಲಿ ಕಚೇರಿಗಳ ಬ್ಯಾಂಕ್ ಖಾತೆಗಳಿಗೆ 18.6 ಕೋಟಿ ರೂ.ಗಳ ಸರಕಾರಿ ಅನುದಾನವನ್ನು ವರ್ಗಾಯಿಸಿದ್ದ ಆರೋಪದಲ್ಲಿ ಮಾಜಿ ಐಎಎಸ್ ಅಧಿಕಾರಿ ಬಿ.ಡಿ.ನಿಮಾನಾ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಗುಜರಾತ್ ಕೇಡರ್ ನ ಮಾಜಿ ಅಧಿಕಾರಿಯಾಗಿರುವ ನಿಮಾನಾರನ್ನು ಸೋಮವಾರ ದಾಹೋದ್ನಿಂದ ಬಂಧಿಸಲಾಗಿದ್ದು,ಜಿಲ್ಲಾ ನ್ಯಾಯಾಲಯವು ಡಿ.4ರವರೆಗೆ ಪೋಲಿಸ್ ಕಸ್ಟಡಿಯನ್ನು ವಿಧಿಸಿದೆ. ನಿಮಾನಾ ಕಳೆದ ಫೆಬ್ರವರಿಯಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು.
2019-2022ರ ನಡುವೆ ರಾಜ್ಯ ಸರಕಾರದ ದಾಹೋದ್ ಬುಡಕಟ್ಟು ಪ್ರದೇಶ ಉಪ ಯೋಜನೆಯ ಆಡಳಿತಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಿಮಾನಾ ನಕಲಿ ಕಚೇರಿಗಳ ಮೂಲಕ ವಂಚನಾ ಜಾಲವನ್ನು ನಡೆಸಲು ಇತರ ಆರೋಪಿಗಳಿಗೆ ನೆರವಾಗಿದ್ದರು ಎಂದು ಎಸ್ಪಿ ರಾಜದೀಪಸಿಂಹ ಝಲಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಅ.26ರಂದು ಗುಜರಾತಿನ ಛೋಟಾ ಉದೇಪುರ ಜಿಲ್ಲೆಯಲ್ಲಿ ಇಂತಹುದೇ ಹಗರಣವನ್ನು ಭೇದಿಸಲಾಗಿತ್ತು, ಕನಿಷ್ಠ 4.16 ಕೋಟಿ ರೂ.ಗಳ ಸರಕಾರಿ ಅನುದಾನವನ್ನು ವಂಚಕರ ಜಾಲಕ್ಕೆ ವರ್ಗಾಯಿಸಲಾಗಿತ್ತು. ಆ ಸಂದರ್ಭದಲ್ಲಿ ಸಂದೀಪ್ ರಾಜಪೂತ, ಆತನ ಸಹವರ್ತಿ ಅಂಕಿತ್ ಸುತಾರ್ ಮತ್ತು ಇತರ ಐವರನ್ನು ಪೋಲಿಸರು ಬಂಧಿಸಿದ್ದರು.
ರಾಜಪೂತ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸರಿನಲ್ಲಿ ಆರು ನಕಲಿ ಕಚೇರಿಗಳನ್ನು ಸ್ಥಾಪಿಸಿದ್ದರೆ ಸುತಾರ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ ಮತ್ತು ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಲಾಗಿತ್ತು.
2018ರಿಂದಲೂ ಈ ವಂಚನೆಯು ನಡೆಯುತ್ತಿದ್ದು, ನಿನಾಮಾ 2019 ಮತ್ತು 2022ರ ನಡುವಿನ ತನ್ನ ಅಧಿಕಾರಾವಧಿಯಲ್ಲಿ ಒಟ್ಟು 100 ಬೋಗಸ್ ಪ್ರಸ್ತಾವಗಳಿಗೆ ಅನುಮೋದನೆ ನೀಡಿದ್ದರು ಎಂದು ಝಲಾ ತಿಳಿಸಿದರು.
ವಿಚಾರಣೆ ಸಂದರ್ಭ ರಾಜಪೂತ ಮತ್ತು ಸುತಾರ್ ನಿನಾಮಾರನ್ನು ಓರ್ವ ಆರೋಪಿಯನ್ನಾಗಿ ಹೆಸರಿಸಿದ್ದರು.
ಕ್ಲಾಸ್ 1 ಎಕ್ಸಿಕ್ಯೂಟಿವ್ ಇಂಜಿನಿಯರ್ ಸೋಗಿನಲ್ಲಿದ್ದ ರಾಜಪೂತ ಈ ಎಲ್ಲ ಕಚೇರಿಗಳನ್ನು ನಡೆಸುತ್ತಿದ್ದ. ಜನರ ಮನೆಗಳಲ್ಲಿ ಬಾವಿ ತೋಡುವಿಕೆ ಮತ್ತು ನಳ್ಳಿಗಳ ಸಂಪರ್ಕ ಸೇರಿದಂತೆ ನೀರಾವರಿ ಸಂಬಂಧಿತ ಕೆಲಸಗಳಿಗಾಗಿ ಬುಡಕಟ್ಟು ಸಮುದಾಯಕ್ಕಾಗಿ ಸರಕಾರವು ನೀಡಿದ್ದ ಆನುದಾನವನ್ನು ಆರೋಪಿಗಳು ಕೊಳ್ಳೆ ಹೊಡೆದಿದ್ದರು ಎಂದೂ ಝಲಾ ತಿಳಿಸಿದರು.