ದಾರಿ ತಪ್ಪಿಸುವ ಜಾಹೀರಾತು: ಐಎಎಸ್ ತರಬೇತಿ ಕೇಂದ್ರಕ್ಕೆ 2 ಲಕ್ಷ ರೂ.ದಂಡ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)ವು ‘ಶುಭ್ರಾ ರಂಜನ್ ಐಎಎಸ್ ಸ್ಟಡಿ’ಗೆ ಎರಡು ಲಕ್ಷ ರೂ.ದಂಡವನ್ನು ವಿಧಿಸಿದೆ. ಇಂತಹ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸುವಂತೆ ಅದು ತರಬೇತಿ ಕೇಂದ್ರಕ್ಕೆ ಆದೇಶಿಸಿದೆ.
ಶುಭ್ರಾ ರಂಜನ್ ಐಎಎಸ್ ಸ್ಟಡಿಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಯಶಸ್ವಿ ಅಭ್ಯರ್ಥಿಗಳ ವಿವರಗಳನ್ನು ಒಳಗೊಂಡಿತ್ತು ಮತ್ತು ಅದೇ ವೇಳೆ ತಾನು ಒದಗಿಸುವ ವಿವಿಧ ಕೋರ್ಸ್ಗಳ ಬಗ್ಗೆ ಜಾಹೀರಾತನ್ನೂ ಪ್ರಕಟಿಸಿತ್ತು. ಆದರೆ 2023ರ ಯುಪಿಎಸ್ಸಿಯ ನಾಗರಿಕ ಸೇವಾ ಪರೀಕ್ಷೆ(ಸಿಎಸ್ಇ)ಯಲ್ಲಿಯ ಸದ್ರಿ ಯಶಸ್ವಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿದ್ದ ಕೋರ್ಸ್ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಜಾಹೀರಾತಿನಲ್ಲಿ ಬಹಿರಂಗಗೊಳಿಸಿರಲಿಲ್ಲ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ರವಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಶುಭ್ರಾ ರಂಜನ್ ಐಎಎಸ್ ಸ್ಟಡಿ ಯುಪಿಎಸ್ಸಿ ಸಿಎಸ್ಇ 2023ರಲ್ಲಿ ಅಗ್ರ 100ರಲ್ಲಿ 13, ಅಗ್ರ 200ರಲ್ಲಿ 28 ಮತ್ತು ಅಗ್ರ 300ರಲ್ಲಿ 39 ವಿದ್ಯಾರ್ಥಿಗಳು ತನ್ನಲ್ಲಿ ತರಬೇತಿ ಪಡೆದಿದ್ದರು ಎಂದು ಜಾಹೀರಾತಿನಲ್ಲಿ ಹೇಳಿಕೊಂಡಿತ್ತು ಎಂದು ತಿಳಿಸಿರುವ ಹೇಳಿಕೆಯು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಗ್ರಾಹಕ ರಕ್ಷಣಾ ಕಾಯ್ದೆ, 2019ರ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ಸರಕು ಅಥವಾ ಸೇವೆಗಳ ಸುಳ್ಳು ಅಥವಾ ದಾರಿ ತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ದಂಡ ವಿಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ತರಬೇತಿ ಕೇಂದ್ರವು ‘ಶುಭ್ರಾ ರಂಜನ್ ಐಎಎಸ್’ ಮತ್ತು ‘ಶುಭ್ರಾ ರಂಜನ್ ಐಎಎಸ್ನ ವಿದ್ಯಾರ್ಥಿಗಳು’ ಎಂಬಂತಹ ಪದಗಳನ್ನು ತನ್ನ ಜಾಹೀರಾತುಗಳಲ್ಲಿ ಮತ್ತು ಲೆಟರ್ಹೆಡ್ಗಳಲ್ಲಿ ಬಳಸುತ್ತಿತ್ತು,ತನ್ಮೂಲಕ ಶುಭ್ರಾ ರಾಜನ್ ಐಎಎಸ್ ಅಧಿಕಾರಿ ಅಥವಾ ಮಾಜಿ ಐಎಎಸ್ ಅಧಿಕಾರಿ ಎಂದು ಸುಳ್ಳನ್ನು ಬಿಂಬಿಸುತ್ತಿತ್ತು ಎಂದು ಸರಕಾರವು ಆರೋಪಿಸಿದೆ.