ದಾರಿ ತಪ್ಪಿಸುವ ಗುಟ್ಕಾ ಜಾಹೀರಾತು ; ಶಾರುಕ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಸಮನ್ಸ್

ಜೈಪುರ: ಗುಟ್ಕಾ ಬ್ರಾಂಡ್ ಗಳಿಗೆ ಸಂಬಂಧಿಸಿದ ದಾರಿ ತಪ್ಪಿಸುವ ಜಾಹೀರಾತು ನೀಡಿದ ಆರೋಪದಲ್ಲಿ ಬಾಲಿವುಡ್ ನಟರಾದ ಶಾರುಕ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್‌ಗೆ ಜೈಪುರದ ಜಿಲ್ಲಾ ಗ್ರಾಹಕ ಆಯೋಗ ಸಮನ್ಸ್ ನೀಡಿದೆ.
ಐಐಎಫ್‌ಎ ಪ್ರಶಸ್ತಿಯ ಬೆಳ್ಳಿ ಹಬ್ಬದ ಕಾರ್ಯಕ್ರಮಕ್ಕಾಗಿ ಶಾರುಕ್ ಖಾನ್ ಜೈಪುರಕ್ಕೆ ಆಗಮಿಸಿದ ಸಂದರ್ಭ ಅವರಿಗೆ ಈ ಸಮನ್ಸ್ ನೀಡಲಾಗಿದೆ. ಕೇಸರಿ ಮಿಶ್ರಿತ ಗುಟ್ಕಾ ಪ್ರಚಾರದ ಜಾಹೀರಾತಿನಲ್ಲಿ ಮಾಡಲಾದ ಪ್ರತಿಪಾದನೆ ಕುರಿತಂತೆ ಮಾರ್ಚ್ 19ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಶಾರುಕ್ ಖಾನ್‌ಗೆ ಅದು ಸೂಚಿಸಿದೆ.
ಇದೇ ರೀತಿಯ ನೋಟಿಸನ್ನು ಅಜಯ್ ದೇವಗನ್, ಟೈಗರ್ ಶ್ರಾಫ್ ಹಾಗೂ ಗುಟ್ಕಾ ಉತ್ಪಾದನಾ ಕಂಪೆನಿಯ ಅಧ್ಯಕ್ಷರಿಗೆ ರವಾನಿಸಲಾಗಿದೆ. ಗ್ರಾಹಕ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಸಿಂಗ್ ಬಡಿಯಾಲ್ ಅವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷರಾದ ಗ್ಯಾರ್ಸಿಲಾಲ್ ಮೀನಾ ಹಾಗೂ ಸದಸ್ಯೆ ಹೇಮಲತಾ ಅಗರ್ವಾಲ್ ಅವರು ಈ ಸಮನ್ಸ್ ಜಾರಿಗೊಳಿಸಿದ್ದಾರೆ.
‘‘ಕಣ ಕಣದಲ್ಲೂ ಕೇಸರಿ’’ ಎಂದು ಹೇಳುವ ಮೂಲಕ ಗುಟ್ಕಾ ಉತ್ಪಾದಕ ಜೆ.ಬಿ. ಇಂಡಸ್ಟ್ರೀಸ್ ತನ್ನ ಜಾಹೀರಾತುಗಳಲ್ಲಿ ದಾರಿತಪ್ಪಿಸುವ ಪ್ರತಿಪಾದನೆಯನ್ನು ಮಾಡುತ್ತಿದೆ ಎಂದು ದೂರು ಆರೋಪಿಸಿದೆ.
ಕೇಸರಿಯ ಬೆಲೆ ಪ್ರತಿ ಕಿ.ಗ್ರಾಂ.ಗೆ ಸರಿಸುಮಾರು 4 ಲಕ್ಷ ರೂ. ಇದೆ. ಆದರೆ, ಗುಟ್ಕಾ ಕೇವಲ ಪ್ರತಿ ಪ್ಯಾಕೇಟ್‌ಗೆ 5 ರೂ.ಗೆ ಮಾರಾಟವಾಗುತ್ತಿದೆ. ಆದುದರಿಂದ ಈ ಪ್ರತಿಪಾದನೆ ವಾಸ್ತವ ಅಲ್ಲ ಎಂದು ದೂರು ದಾರ ಗಮನಸೆಳೆದಿದ್ದಾರೆ.
ಉತ್ನನ್ನ ಕೇಸರಿಯನ್ನಾಗಲಿ, ಪರಿಮಳವನ್ನಾಗಲಿ ಹೊಂದಿಲ್ಲ. ಆದರೂ ಗಣ್ಯರು ಇದನ್ನು ಪ್ರಚಾರ ಮಾಡುವುದನ್ನು ಮುಂದುವರಿಸಿದ್ದಾರೆ. ಇದು ಗ್ರಾಹಕರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ದೂರುದಾರರು ತಿಳಿಸಿದ್ದಾರೆ.
ಇಂತಹ ವಂಚಿಸುವ ಜಾಹೀರಾತುಗಳು ಗುಟ್ಕಾ ಬಳಕೆಯನ್ನು ಉತ್ತೇಜಿಸುವುದು ಮಾತ್ರವಲ್ಲ, ಬದಲಾಗಿ ಆರೋಗ್ಯಕ್ಕೆ ಅಪಾಯವನ್ನು ಕೂಡ ತಂದೊಡ್ಡಲಿದೆ ಎಂದು ದೂರುದಾರರು ಪ್ರತಿಪಾದಿಸಿದ್ದಾರೆ. ಇಂತಹ ದಾರಿ ತಪ್ಪಿಸುವ ಪ್ರಚಾರ ಅಭಿಯಾನವನ್ನು ನಿಷೇಧಿಸುವಂತೆ ದೂರುದಾರರು ಆಡಳಿತವನ್ನು ಆಗ್ರಹಿಸಿದ್ದಾರೆ.