ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಕರೆತರುವ ಮಿಷನ್ ಗೆ ಚಾಲನೆ

PC: x.com/fpjindia
ವಾಷಿಂಗ್ಟನ್: ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್)ದಲ್ಲಿ ಒಂಬತ್ತು ತಿಂಗಳಿಂದ ಅತಂತ್ರವಾಗಿ ಸಿಕ್ಕಿಹಾಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆ ತರುವ ನಾಸಾ ಹಾಗೂ ಸ್ಪೇಸ್ ಎಕ್ಸ್ ನ ಜಂಟಿ ಮಿಷನ್ ಶುಕ್ರವಾರ ರಾತ್ರಿ ಚಾಲನೆ ಪಡೆದಿದೆ.
ಕ್ರೂ ಡ್ರಾಗನ್ ಕ್ಯಾಪ್ಸೂಲನ್ನು ತುದಿಗೆ ಅಳವಡಿಸಲಾಗಿರುವ ಫಾಲ್ಕನ್ 9 ರಾಕೆಟ್, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೆಂದ್ರದಿಂದ ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 7.30ಕ್ಕೆ ಉಡಾವಣೆಗೊಂಡಿದೆ. ಭೂಕಕ್ಷೆಯ ಹೊರಠಾಣೆಗೆ ನಾಲ್ಕು ಮಂದಿಯ ತಂಡ ಪ್ರಯಾಣ ಬೆಳೆಸಿದೆ.
ನಾಸಾದ ಆ್ಯನ್ ಮೆಕ್ಲೀನ್ ಮತ್ತು ನಿಕೋಲ್ ಅಯೇರ್ಸ್, ಜಾಕ್ಸಾ ಗಗನಯಾನಿ ತಕುಯೊ ಒನಿಶಿ ಮತ್ತು ರೊಸ್ಕೋಸ್ಮಸ್ ನ ಕಿರಿಲ್ ಪೆಸ್ಕೋವ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದತ್ತ ಪ್ರಯಾಣ ಬೆಳೆಸಿದ್ದು, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ಇತರ ಇಬ್ಬರನ್ನು ವಾಪಾಸು ಭೂಮಿಗೆ ಕಳುಹಿಸಲಿದ್ದಾರೆ.
ಈ ಬಾಹ್ಯಾಕಾಶ ನೌಕೆ ಐಎಸ್ಎಸ್ ನಲ್ಲಿ ಮಾರ್ಚ್ 15ರಂದು ನಿಲುಗಡೆಯಾದ ಬಳಿಕ, ನಾಲ್ವರು ಗಗನಯಾತ್ರಿಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ದಿನಗಳನ್ನು ಕಳೆಯಲಿದ್ದಾರೆ. ಬಳಿಕ ಕ್ರೂ-9 ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದು ಮಾರ್ಚ್ 19ಕ್ಕೆ ಅಲ್ಲಿಂದ ಹೊರಡುವ ನಿರೀಕ್ಷೆ ಇದೆ.
ಮಾರ್ಚ್ 12ರಂದು ಈ ಪರ್ಯಾಯ ಬಾಹ್ಯಾಕಾಶ ನೌಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಕೊನೆಕ್ಷಣದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಷನ್ ಮುಂದಕ್ಕೆ ಹೋಗಿತ್ತು. ಇವುಗಳನ್ನು ಬಗೆಹರಿಸಿ ಮಾರ್ಚ್ 15ರಂದು ಉಡಾಯಿಸಲು ಸಜ್ಜುಗೊಳಿಸಲಾಗಿತ್ತು.