ಕೃತಕ ಬುದ್ಧಿಮತ್ತೆ(AI)ಯ ದುರ್ಬಳಕೆ:ಪ್ರಧಾನಿ ಮೋದಿ ಆತಂಕ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ‘ಡೀಪ್ಫೇಕ್’ಗಳನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆ (AI)ಯ ದುರ್ಬಳಕೆಯ ಬಗ್ಗೆ ಶುಕ್ರವಾರ ಆತಂಕ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿಯವರು,ಈ ಬಿಕ್ಕಟ್ಟಿನ ಕುರಿತು ಮಾಧ್ಯಮಗಳು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಡೀಪ್ಫೇಕ್ ವೀಡಿಯೊ ಸಿಂಥೆಟಿಕ್ ಮಾಧ್ಯಮವಾಗಿದ್ದು, ಇದರಲ್ಲಿ ಅಸ್ತಿತ್ವದಲ್ಲಿರುವ ಚಿತ್ರ ಅಥವಾ ವೀಡಿಯೊದಲ್ಲಿನ ವ್ಯಕ್ತಿಯನ್ನು ಇನ್ಯಾರದೋ ಹೋಲಿಕೆಯೊಂದಿಗೆ ಬದಲಿಸಲಾಗುತ್ತದೆ.
ಕೃತಕ ಬುದ್ಧಿಮತ್ತೆಯ ನೆರವಿನೊಂದಿಗೆ ಸೃಷ್ಟಿಸಲಾಗಿದೆ ಎಂದು ಶಂಕಿಸಲಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕೆಲವೇ ದಿನಗಳಲ್ಲಿ ಪ್ರಧಾನಿಯವರ ಹೇಳಿಕೆ ಹೊರಬಿದ್ದಿದೆ. ಮೂಲ ವೀಡಿಯೊ ಬ್ರಿಟಿಷ್-ಇಂಡಿಯನ್ ಸಾಮಾಜಿಕ ಮಾಧ್ಯಮ ಪ್ರಭಾವಿ ಮಹಿಳೆಯದು ಎನ್ನಲಾಗಿದ್ದು, ಆಕೆಯ ಮುಖವನ್ನು ಎಡಿಟ್ ಮಾಡಿ ಮಂದಣ್ಣ ಅವರ ಮುಖವನ್ನು ಜೋಡಿಸಲಾಗಿತ್ತು.
ಇಲ್ಲಿಯ ಬಿಜೆಪಿ ಕೇಂದ್ರಕಚೇರಿಯಲ್ಲಿ ‘ದೀಪಾವಳಿ ಮಿಲನ್ ’ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತವನ್ನು ‘ವಿಕಸಿತ ಭಾರತ ’ವನ್ನಾಗಿ ಮಾಡುವ ತನ್ನ ಸಂಕಲ್ಪವನ್ನು ಪ್ರಸ್ತಾಪಿಸಿದರು.
‘ವೋಕಲ್ ಫಾರ್ ಲೋಕಲ್’ಗೆ ಜನರ ಬೆಂಬಲ ಲಭಿಸಿದೆ ಎಂದು ಹೇಳಿದ ಅವರು, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿಯ ಭಾರತದ ಸಾಧನೆಗಳು ದೇಶದ ಮುನ್ನಡೆ ನಿಲ್ಲುವುದಿಲ್ಲ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಿವೆ ಎಂದರು.
ಮಂದಣ್ಣ ಅವರ ಡೀಪ್ಫೇಕ್ ವೀಡಿಯೊ ತಂತ್ರಜ್ಞಾನದ ನಿಯಂತ್ರಣಕ್ಕೆ ವ್ಯಾಪಕ ಕರೆಗಳಿಗೆ ಕಾರಣವಾಗಿದೆ. ಡೀಪ್ಫೇಕ್ ವೀಡಿಯೊ ಇತ್ತೀಚಿನದಾಗಿದ್ದು, ತಪ್ಪು ಮಾಹಿತಿಯ ಹೆಚ್ಚು ಅಪಾಯಕಾರಿ ಮತ್ತು ಹಾನಿಕಾರಕ ರೂಪವಾಗಿದೆ ಎಂದು ಹೇಳಿರುವ ಕೇಂದ್ರ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಸಚಿವಾಲಯವು,ಅವುಗಳನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿದೆ.