ಕೇಂದ್ರ ಸರಕಾರದಿಂದ ಸಿಬಿಐ, ಈಡಿ ದುರುಪಯೋಗ ; ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಸಂಸದ ವಾಗ್ದಾಳಿ
ಪ್ರಮೋದ್ ತಿವಾರಿ | Photo: PTI
ಹೊಸದಿಲ್ಲಿ: ಪ್ರತಿಪಕ್ಷ ನಾಯಕರನ್ನು ದಮನಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯವನ್ನು ಕೇಂದ್ರ ಸರಕಾರವು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಮಂಗಳವಾರ ಆರೋಪಿಸಿದ್ದಾರೆ.
ಮಧ್ಯಾಂತರ ಬಜೆಟ್ ಅಧಿವೇಶನಕ್ಕೆ ಮುನ್ನ, ಕೇಂದ್ರ ಸರಕಾರ ಕರೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಹಣ ವರ್ಗಾವಣೆ ಪ್ರಕರಣಗಳಲ್ಲಿ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ರನ್ನು ಅನುಷ್ಠಾನ ನಿರ್ದೇಶನಾಲಯ ಪ್ರಶ್ನಿಸುತ್ತಿರುವುದು ಅಧಿಕಾರ ದುರುಪಯೋಗಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.
‘‘ದೇಶದಲ್ಲಿ ಅಘೊಷಿತ ಸರ್ವಾಧಿಕಾರ ಚಾಲ್ತಿಯಲ್ಲಿದೆ’’ ಎಂದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತಿವಾರಿ ಹೇಳಿದರು.
ಸರ್ವಪಕ್ಷ ಸಭೆಯಲ್ಲಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯ ಪರವಾಗಿ ಸಂಸದ ತಿವಾರಿ ಭಾಗವಹಿಸಿದರು.
ಅದೂ ಅಲ್ಲದೆ, ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಮೇಲೆ ಅಸ್ಸಾಮಿನಲ್ಲಿ ನಡೆದ ದಾಳಿಯನ್ನೂ ಕಾಂಗ್ರೆಸ್ ಪ್ರತಿನಿಧಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯ ಅಧ್ಯಕ್ಷತೆಯಲ್ಲಿ ಸಂಸತ್ನ ವಾಚನಾಲಯ ಕಟ್ಟಡದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ವಿವಿಧ ಪಕ್ಷಗಳ ಸದನ ನಾಯಕರು ಭಾಗವಹಿಸಿದರು. ಪ್ರತಿ ಸಂಸದೀಯ ಅಧಿವೇಶನಕ್ಕೆ ಮುನ್ನ ಸರ್ವ ಪಕ್ಷ ನಡೆಸುವುದು ಸಂಪ್ರದಾಯವಾಗಿದೆ.
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘವಾಲ್ ಸಭೆಯಲ್ಲಿ ಉಪಸ್ಥಿತರಿದ್ದರು.
ಮಧ್ಯಂತರ ಬಜೆಟ್ ಅಧಿವೇಶನವು ಬುಧವಾರ ಆರಂಭಗೊಳ್ಳಲಿದೆ.