ಮೋದಿ ಸರಕಾರದಿಂದ ತನಿಖಾ ಏಜೆನ್ಸಿಗಳ ದುರ್ಬಳಕೆ ನಿಚ್ಚಳವಾಗಿ ಕಾಣುತ್ತಿದೆ: ಚಿದಂಬರಂ ಟೀಕೆ
ಪಿ.ಚಿದಂಬರಂ | Photo: PTI
ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರು ಕೇಂದ್ರೀಯ ಏಜೆನ್ಸಿಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಷ್ಟು ನಿಚ್ಚಳವಾಗಿದೆಯೆಂದರೆ, ಆ ಬಗ್ಗೆ ನ್ಯಾಯಾಲಯದಲ್ಲಿ ವಾದಿಸುವ ಅಗತ್ಯವೇ ಬರಲಾರದು ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಶನಿವಾರ ಹೇಳಿದ್ದಾರೆ.
‘‘ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ನಡುವೆ ತನಿಖಾ ಏಜೆನ್ಸಿಗಳು ಕಾಂಗ್ರೆಸ್ ಪಕ್ಷದ ನಾಲ್ವರು ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿತ್ತು ಅಥವಾ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧಕಾರ್ಯಾಚರಣೆ ನಡೆಸಿತ್ತು. ಅವರಲ್ಲೊಬ್ಬರು ನವೆಂಬರ್ 1ರಂದು ಬಿಜೆಪಿಗೆ ರಾಜೀನಾಮೆ ನೀಡಿದವರು’’ ಎಂದು ಚಿದಂಬರಂ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ತನಗೆ ಗೊತ್ತಿರುವ ಪ್ರಕಾರ ಒಬ್ಬನೇ ಒಬ್ಬ ಬಿಜೆಪಿ ಅಭ್ಯರ್ಥಿಯ ವಿರುದ್ಧ ಕೇಂದ್ರೀಯ ಏಜೆನ್ಸಿಗಳು ಶೋಧಕಾರ್ಯ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಾಜಿ ಸಂಸದ ಜಿ.ವಿವೇಕಾನಂದ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಬಳಿಕ ಚಿದಂಬರಂ ಈ ಟ್ವೀಟ್ ಮಾಡಿದ್ದಾರೆ.