ಮಹಾರಾಷ್ಟ್ರ ಚುನಾವಣಾ ಪ್ರಕ್ರಿಯೆಯನ್ನು ನಿಯಂತ್ರಿಸಲು ಅಧಿಕಾರ ಮತ್ತು ಹಣದ ದುರ್ಬಳಕೆ: ಶರದ್ ಪವಾರ್ ಆರೋಪ
ಶರದ್ ಪವಾರ್ | PC ; PTI
ಪುಣೆ: ಮಹಾರಾಷ್ಟ್ರ ಚುನಾವಣಾ ಪ್ರಕ್ರಿಯೆಯನ್ನು ನಿಯಂತ್ರಿಸಲು ಅಧಿಕಾರ ಮತ್ತು ಹಣದ ದುರ್ಬಳಕೆ ಮಾಡಲಾಗಿದೆ ಎಂದು ಶನಿವಾರ ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಆರೋಪಿಸಿದ್ದಾರೆ. ಈ ಹಿಂದಿನ ಯಾವುದೇ ವಿಧಾನಸಭಾ ಅಥವಾ ಸಾರ್ವತ್ರಿಕ ಚುನಾವಣೆಯಲ್ಲೂ ಈ ಮಟ್ಟದ ದುರ್ಬಳಕೆ ನಡೆದಿರಲಿಲ್ಲ ಎಂದೂ ಅವರು ದೂರಿದ್ದಾರೆ.
ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪ್ರತಿಭಟಿಸುತ್ತಿರುವ ಹಿರಿಯ ಹೋರಾಟಗಾರ ಡಾ. ಬಾಬಾ ಅಧವ್ ಅವರನ್ನು ಭೇಟಿ ಮಾಡಿದ ನಂತರ, ಪವಾರ್ ಮೇಲಿನಂತೆ ಹೇಳಿಕೆ ನೀಡಿದ್ದಾರೆ.
“ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದೆಂದೂ ನಡೆಯದಷ್ಟು ಅಧಿಕಾರ ದುರ್ಬಳಕೆ ಹಾಗೂ ಹಣದ ಹೊಳೆ ಹರಿದಿದೆ ಎಂದು ಜನರು ಪರಸ್ಪರ ಪಿಸುಗುಡುತ್ತಿದ್ದಾರೆ. ಇಂತಹ ಮಾತುಗಳು ಸ್ಥಳೀಯ ಮಟ್ಟದ ಚುನಾವಣೆಗಳ ಸಂದರ್ಭದಲ್ಲಿ ಕೇಳಿ ಬರುತ್ತಿದ್ದವು. ಆದರೆ, ಅಧಿಕಾರ ದುರ್ಬಳಕೆ ಹಾಗೂ ಹಣದ ನೆರವಿನಿಂದ ಇಡೀ ಚುನಾವಣಾ ಪ್ರಕ್ರಿಯೆಯನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದನ್ನು ಈ ಹಿಂದೆಂದೂ ನೋಡಿರಲಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ನಾವಿದಕ್ಕೆ ಸಾಕ್ಷಿಯಾದೆವು. ಜನರೀಗ ಅಸಮಾಧಾನಗೊಂಡಿದ್ದಾರೆ” ಎಂದೂ ಅವರು ಹೇಳಿದ್ದಾರೆ.
“ಈ ವಿಷಯದಲ್ಲಿ ನಾಯಕತ್ವ ವಹಿಸಿರುವ ಬಾಬಾ ಅಧವ್, ಫುಲೆ ವಾಡಾದಲ್ಲಿ ಪ್ರತಿಭಟಿಸುತ್ತಿದ್ದಾರೆ ಎಂದು ನಾನು ಕೇಳಿದೆ. ಅವರು ಪ್ರತಿಭಟನೆಯಿಂದ ಜನರಿಗೆ ಭರವಸೆ ಮೂಡಿದೆ. ಆದರೆ, ಇದಿಷ್ಟೇ ಸಾಲದು. ಸಂಸದೀಯ ಪ್ರಜಾಪ್ರಭುತ್ವದ ಹೆಣಿಗೆಗಳು ನಾಶಗೊಳ್ಳುವ ಅಪಾಯ ಎದುರಾಗಿರುವುದರಿಂದ, ಜನರು ದೊಡ್ಡ ಸಂಖ್ಯೆಯಲ್ಲಿ ಬಂಡಾಯವೇಳಬೇಕಾದ ಅಗತ್ಯವಿದೆ” ಎಂದು ಅವರು ಕರೆ ನೀಡಿದರು.
90 ವರ್ಷ ವಯಸ್ಸಿನ ಬಾಬಾ ಅಧವ್, ಗುರುವಾರದಿಂದ ನಗರದಲ್ಲಿರುವ ಸಾಮಾಜಿಕ ಸುಧಾರಕ ಜ್ಯೋತಿಬಾ ಫುಲೆ ಅವರ ನಿವಾಸವಾದ ಫುಲೆ ವಾಡಾದಲ್ಲಿ ಮೂರು ದಿನಗಳ ಪ್ರತಿಭಟನೆ ಪ್ರಾರಂಭಿಸಿದ್ದಾರೆ.