'ಮಣಿಪುರದಲ್ಲಿ ಕ್ರೈಸ್ತವಿರೋಧಿ ಹಿಂಸಾಚಾರ': ಪಕ್ಷಕ್ಕೆ ರಾಜೀನಾಮೆ ನೀಡಿದ ಮಿಝೋರಾಂ ಬಿಜೆಪಿ ಉಪಾಧ್ಯಕ್ಷ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮಣಿಪುರದಲ್ಲಿ ನಡೆದ ಹಿಂಸಾಚಾರ ನಡೆಯುತ್ತಿರುವ ನಡುವೆಯೂ ಬಿಜೆಪಿಯು ಕ್ರೈಸ್ತ ಸಮುದಾಯದ ವಿಚಾರದಲ್ಲಿ ಭೇದಭಾವ ಮಾಡುತ್ತಿದೆ ಎಂದು ಆರೋಪಿಸಿ ಮಿಝೋರಾಂ ಬಿಜೆಪಿ ಉಪಾಧ್ಯಕ್ಷ ಆರ್. ವನ್ರಾಮ್ ಚುವಾಂಗಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ನೆರೆಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ‘ಕ್ರೈಸ್ತ ವಿರೋಧಿ ಚಟುವಟಿಕೆಗಳಿಂದ‘ ತೀವ್ರ ನೊಂದಿದ್ದೇನೆ. ಮೈತೇಯಿ ಉಗ್ರಗಾಮಿಗಳು 357 ಕ್ರಿಶ್ಚಿಯನ್ ಚರ್ಚ್ಗಳು, ಪಾದ್ರಿಗಳ ನಿವಾಸಗಳು ಮತ್ತು ವಿವಿಧ ಚರ್ಚ್ಗಳಿಗೆ ಸೇರಿದ ಕಚೇರಿ, ಕಟ್ಟಡಗಳನ್ನು ಸುಟ್ಟುಹಾಕಿದ್ದಾರೆ ಎಂದು ಮಿಝೋರಾಂ ಬಿಜೆಪಿ ಮುಖ್ಯಸ್ಥ ವನ್ಲಾಲ್ಮುವಾಕಾ ಅವರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ವನ್ರಾಮ್ ಚುವಾಂಗಾ ಆರೋಪಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕ್ರೈಸ್ತ ಸಮುದಾಯವನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಅವರು, "ಅಮಿತ್ ಶಾ ಸ್ವತಃ ಇಂಫಾಲ್ಗೆ ಹೋಗಿದ್ದರು ಮತ್ತು ಮೂರು ಹಗಲು, ಎರಡು ರಾತ್ರಿ ಇದ್ದರು. ಆದರೆ ಬಳಿಕವೂ ಹಿಂಸಾಚಾರ ಮುಂದುವರಿದಿದೆ" ಎಂದು ಅವರು ಹೇಳಿದ್ದಾರೆ.