ಪಂಚರಾಜ್ಯಗಳ ಚುನಾವಣಾ ಕದನಕ್ಕೆ ನಾಳೆ ನಾಂದಿ ಹಾಡಲಿರುವ ಮಿಜೋರಾಂ, ಛತ್ತೀಸ್ಗಡ
File Photo
ಹೊಸದಿಲ್ಲಿ : ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಳಿಗೆ ಮುನ್ನ ಸೆಮಿಪೈನಲ್ ಎಂದೇ ಪರಿಗಣಿಸಲಾಗಿರುವ ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿಗೆ ರಂಗ ಸಜ್ಜುಗೊಂಡಿದೆ.
ನ.7ರಂದು ಮಿಜೋರಾಂ ಮತ್ತು ಛತ್ತೀಸ್ಗಡ ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಇದರೊಂದಿಗೆ 2023ರ ಅಂತಿಮ ವಿಧಾನಸಭಾ ಚುನಾವಣೆಗಳಿಗೆ ಚಾಲನೆ ದೊರಕಲಿದೆ.
ಮಂಗಳವಾರ ಮಿಜೋರಾಂನ ಎಲ್ಲ 40 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದೇ ವೇಳೆ ಮೊದಲ ಹಂತದಲ್ಲಿ, 90 ಸದಸ್ಯಬಲದ ಛತ್ತೀಸ್ಗಡ ವಿಧಾನಸಭೆಯ 20 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಬುಡಕಟ್ಟು ರಾಜ್ಯವಾಗಿರುವ ಛತ್ತೀಸ್ಗಡ ಆಡಳಿತ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಆಪ್ 57 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಿಎಸ್ಪಿ ಗೊಂಡ್ವಾನಾ ಗಣತಂತ್ರ ಪಾರ್ಟಿಯ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದೆ.
2018ರಲ್ಲಿ 90 ಸ್ಥಾನಗಳ ಪೈಕಿ 68 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಂಡಿತ್ತು.
ಮಿಜೋರಾಂನಲ್ಲಿ ಮುಖ್ಯಮಂತ್ರಿ ರೆರಾಮ್ತಂಗ ನೇತೃತ್ವದ ಮಿರೆ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಅಧಿಕಾರವನ್ನು ಉಳಿಸಿಕೊಳ್ಳುವ ಭರವಸೆಯನ್ನು ಹೊಂದಿದೆ. ಅದು 2018ರಲ್ಲಿ ರಾಜ್ಯದಲ್ಲಿಯ 40 ಕ್ಷೇತ್ರಗಳ ಪೈಕಿ 28ರಲ್ಲಿ ವಿಜಯ ಧ್ವಜವನ್ನು ಹಾರಿಸಿತ್ತು.
ಎಂಎನ್ಎಫ್ ಮತ್ತು ಕಾಂಗ್ರೆಸ್ ಎಲ್ಲ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ ಮತ್ತು ಆಪ್ ಅನುಕ್ರಮವಾಗಿ 23 ಮತ್ತು ನಾಲ್ಕು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಮಿಜೋರಾಂ ಬಿಜೆಪಿ ಆಡಳಿತ ಮೈತ್ರಿಕೂಟದ ಭಾಗವಾಗಿರದ ಏಕೈಕ ಈಶಾನ್ಯ ರಾಜ್ಯವಾಗಿದೆ.