NEP ವಿವಾದ | ಜೇನುಗೂಡಿನ ಮೇಲೆ ಕಲ್ಲೆಸೆಯಬೇಡಿ: ಕೇಂದ್ರಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್ ಎಚ್ಚರಿಕೆ

ಎಂಕೆ ಸ್ಟಾಲಿನ್ (Photo: PTI)
ಚೆನ್ನೈ : ಕೇಂದ್ರ ಮತ್ತು ತಮಿಳುನಾಡು ಸರಕಾರದ ನಡುವಿನ ಭಾಷಾ ವಿವಾದ ತೀವ್ರಗೊಂಡಿದೆ. ಎಂಕೆ ಸ್ಟಾಲಿನ್ ದ್ವಿಭಾಷಾ ನೀತಿಗೆ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಿದ್ದು, ʼಜೇನುಗೂಡಿನ ಮೇಲೆ ಕಲ್ಲು ಎಸೆಯಬೇಡಿʼ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020)ಯನ್ನು ವಿರೋಧಿಸುತ್ತಿರುವುದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಮತ್ತು ʼಮಕ್ಕಳ ಹಿತಾಸಕ್ತಿಗಳ ಬಗ್ಗೆ ಯೋಚಿಸಿʼ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ 2020) ತ್ರಿಭಾಷಾ ನೀತಿಯ ಅಡಿಯಲ್ಲಿ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯಕ್ಕೆ ಹಾನಿಯಾಗುವ ಯಾವುದನ್ನೂ ಜಾರಿಗೆ ತರಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಟಾಲಿನ್, ಬಿಜೆಪಿ ತಮಿಳುನಾಡಿನ ಅಭಿವೃದ್ಧಿಯನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ. ರಾಜ್ಯಗಳು ಬೆಳೆದು ಬಲಿಷ್ಠವಾದಾಗ ರಾಷ್ಟ್ರವು ಬೆಳೆಯುತ್ತದೆ. ಆದರೆ, ಈ ಕೇಂದ್ರ ಸರಕಾರವು ರಾಜ್ಯದ ಬೆಳವಣಿಗೆಯನ್ನು ನೋಡಲು ಬಯಸುವುದಿಲ್ಲ ಮತ್ತು ಅದನ್ನು ತಡೆಯಲು ಪ್ರಯತ್ನಿಸುತ್ತಿದೆ. ಜಿಎಸ್ಟಿ ಮೂಲಕ ನಮ್ಮ ಆದಾಯವನ್ನು ಕಸಿದುಕೊಂಡಿದ್ದಾರೆ. ಅವರು ಹಣ ನೀಡುತ್ತಿಲ್ಲ ಅಥವಾ ಹೊಸ ಯೋಜನೆಗಳನ್ನು ಘೋಷಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಹಂಚಿಕೊಳ್ಳಬೇಕಾದ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಪರಿಸ್ಥಿತಿಗಳಲ್ಲಿಯೂ ಸಹ, ನಾವು ಹೊಸ ಯೋಜನೆಗಳನ್ನು ಜಾರಿಗೊಳಿಸುವುದನ್ನು ಮುಂದುವರಿಸುತ್ತೇವೆ. ಇದನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಎನ್ಇಪಿಯನ್ನು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಅನಾನುಕೂಲತೆಯನ್ನುಂಟುಮಾಡಲು ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಮಕ್ಕಳು ಶಿಕ್ಷಣ ಪಡೆಯುವುದನ್ನು ಅಥವಾ ಉದ್ಯೋಗಗಳನ್ನು ಹುಡುಕುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ನೂರು ವರ್ಷಗಳ ಹಿಂದೆ ನಮ್ಮ ಜನರಿಗೆ ಶಿಕ್ಷಣವನ್ನು ನಿರಾಕರಿಸಲಾಯಿತು. ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಸಂಸ್ಥೆಗಳ ಬಾಗಿಲು ತೆರೆಯಲು ಮೀಸಲಾತಿಯನ್ನು ಪರಿಚಯಿಸಲಾಯಿತು. ಈಗ, ಈ ಸಾಮಾಜಿಕ ನ್ಯಾಯವನ್ನು ರದ್ದುಗೊಳಿಸಲು ಮತ್ತು ತಮಿಳುನಾಡಿನಲ್ಲಿ ಈ ಸಮುದಾಯಗಳ ಪ್ರಗತಿಯನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.