ವಿವಿಪ್ಯಾಟ್ ಯಂತ್ರ ನೆಲಕ್ಕೆಸೆದ ಶಾಸಕ: ಸಿಸಿಟಿವಿಯಲ್ಲಿ ಕೃತ್ಯ ಸೆರೆ
Photo: Screenshot/NDtv
ಹೈದರಾಬಾದ್: ಅಂಧ್ರಪ್ರದೇಶದ ಅಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್ ಶಾಸಕರೊಬ್ಬರು ಮತಗಟ್ಟೆಯಲ್ಲಿ ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರವನ್ನು ಎತ್ತಿಕೊಂಡು ನೆಲಕ್ಕೆ ಎಸೆಯುತ್ತಿರುವ ಸಿಸಿಟಿವಿ ದೃಶ್ಯಾವಳಿ ಅಚ್ಚರಿ ಮೂಡಿಸಿದೆ.
ಈ ಶಾಸಕ ಏಳು ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ)ಗಳನ್ನು ಧ್ವಂಸಪಡಿಸಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಈ ಶಾಸಕನನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಇಂಥ ಧ್ವಂಸ ಕೃತ್ಯಕ್ಕೆ ಆ ಶಾಸಕ ಹಾಗೂ ವೈಎಸ್ ಆರ್ ಸಿಪಿಗೆ ಸೋಲಿನ ಭೀತಿಯೇ ಕಾರಣ ಎಂದು ವಿರೋಧ ಪಕ್ಷವಾದ ತೆಲುಗುದೇಶಂ ಹೇಳಿದೆ.
ಆಂಧ್ರಪ್ರದೇಶದ ಎಲ್ಲ 175 ವಿಧಾನಸಭಾ ಕ್ಷೇತ್ರಗಳು ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಂದು ನಡೆದ ಮತದಾನದ ವೇಳೆ ಈ ಘಟನೆ ನಡೆದಿದೆ. ಹಲವು ಕಡೆಗಳಲ್ಲಿ ಹಿಂಸಾಚಾರ ನಡೆದಿದ್ದು, ಆ ಬಳಿಕವೂ ಇಂಥ ಘಟನೆಗಳು ವರದಿಯಾಗಿವೆ.
ಈ ವಿಡಿಯೊ ತುಣುಕಿಲ್ಲಿ ವೈಎಸ್ ಆರ್ ಸಿಪಿ ಮುಖಂಡ ಹಾಗೂ ಮಚ್ಲೇರಾ ಶಾಸಕ ಪಿನ್ನೇಲಿ ರಾಮಕೃಷ್ಣ ರೆಡ್ಡಿ, ಪಲ್ವಾಲಿ ಗೇಟ್ ಮತಗಟ್ಟೆಗೆ ತೆರಳಿದಾಗ ಚುನಾವಣಾ ಅಧಿಕಾರಿಗಳು ಗೌರವ ಸೂಚಕವಾಗಿ ಎದ್ದು ನಿಂತಿರುವುದು ಕಾಣುತ್ತಿದೆ. ಏನೂ ಮಾತನಾಡದೇ ಶಾಸಕ ಮತದಾನ ಮಾಡುವ ಇವಿಎಂ ಇದ್ದ ಜಾಗಕ್ಕೆ ತೆರಳಿ ವಿವಿಪ್ಯಾಟ್ ಎತ್ತಿಕೊಂಡು ನೆಲಕ್ಕೆ ಅಪ್ಪಳಿಸುತ್ತಿರುವುದು ಕಾಣುತ್ತಿದೆ.
ಮತಗಟ್ಟೆಯಲ್ಲಿದ್ದ ಒಬ್ಬ ವ್ಯಕ್ತಿ, ಶಾಸಕನ ಸಹಚರನೊಬ್ಬನನ್ನು ಹೊಡೆದು ರೆಡ್ಡಿ ಬಳಿಗೆ ಬರುತ್ತಿದ್ದಾನೆ. ಆತನನ್ನು ಹಿಡಿದು ನಿಲ್ಲಿಸಿದ ಸಂದರ್ಭದಲ್ಲಿ ಶಾಸಕ ಇವಿಎಂ ಕಂಟ್ರೋಲ್ ಯುನಿಟನ್ನು ಒದೆಯುತ್ತಿರುವುದು ಕಾಣಿಸುತ್ತಿದೆ. ಹೊರಹೋಗುವ ಮುನ್ನ ಶಾಸಕ ದಾಳಿಕೋರನಿಗೆ ಎಚ್ಚರಿಕೆ ನೀಡಿದ್ದಾರೆ.
On Camera, Andhra MLA Flings VVPAT To Ground In Polling Booth
— NDTV (@ndtv) May 22, 2024
Read Here: https://t.co/CbhZye69mT pic.twitter.com/ttrBCs3X0y