ಸ್ವಪಕ್ಷದ ಶಾಸಕರಿಂದಲೇ ಸಿಎಂ ಬದಲಾವಣೆಗೆ ಆಗ್ರಹ; ಹಿಮಾಚಲ ಕಾಂಗ್ರೆಸ್ ಸರ್ಕಾರ ಬಿಕ್ಕಟ್ಟಿನಲ್ಲಿ
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು. (Photo: PTI)
ಶಿಮ್ಲಾ: ಕಾಂಗ್ರೆಸ್ ಪಕ್ಷದ ಆರು ಮಂದಿ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬೆನ್ನಲ್ಲೇ, ಸುಖ್ವಿಂದರ್ ಸಿಂಗ್ ಸುಖು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎನ್ನುವುದು ರಾಜ್ಯದ 26 ಕಾಂಗ್ರೆಸ್ ಶಾಸಕರ ಅಭಿಪ್ರಾಯ ಎಂದು ಅಡ್ಡಮತದಾನ ಮಾಡಿದ ಆರು ಶಾಸಕರು ಬಾಂಬ್ ಸಿಡಿಸಿದ್ದಾರೆ.
ರಾಜ್ಯಸಭಾ ಚುನಾವಣೆ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ನಾಂದಿ ಹಾಡಿದ್ದು, ಪಕ್ಷದ ಶಾಸಕರಿಂದಲೇ ಸಿಂಗ್ ಪದಚ್ಯುತಿಗೆ ಆಗ್ರಹ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಸಜ್ಜಾಗಿದೆ.
68 ಸದಸ್ಯಬಲದ ವಿಧಾನಸಭೆಯಲ್ಲಿ 40 ಮಂದಿ ಶಾಸಕರನ್ನು ಹೊಂದಿ, ಮೂವರು ಪಕ್ಷೇತರರ ಬೆಂಬಲವನ್ನೂ ಗಳಿಸಿರುವ ಕಾಂಗ್ರೆಸ್ನ ಅಭ್ಯರ್ಥಿ ಅಭಿಷೇಕ್ ಸಿಂಘ್ವಿ ಸುಲಭ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಆದರೆ ಕಾಂಗ್ರೆಸ್ ಶಾಸಕರ ಅಡ್ಡಮತದಾನದಿಂದಾಗಿ ಬಿಜೆಪಿ 34 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿತು. 26 ಮಂದಿ ಶಾಸಕರು ಸಿಎಂ ಬಗ್ಗೆ ಅಸಮಾಧಾನ ಹೊಂದಿದ್ದು, ಅವರನ್ನು ಬದಲಾಯಿಸಬೇಕು ಎನ್ನುವುದು ಅಡ್ಡಮತದಾನ ಮಾಡಿದ ಶಾಸಕರ ಒಕ್ಕೊರಲ ಆಗ್ರಹ.
ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಹರ್ಯಾಣದ ಮಾಜಿ ಸಿಎಂ ಭೂಪೀಂದರ್ ಹೂಡಾ ಹಿಮಾಚಲಕ್ಕೆ ಧಾವಿಸಿದ್ದು, ಸುಖು ಅವರ ಬದಲಾವಣೆ ಇಲ್ಲದೇ ಯಾವುದೇ ಮಾತುಕತೆಗೆ ಸಿದ್ಧವಿಲ್ಲ ಎಂದು ಭಿನ್ನಮತೀಯ ಶಾಸಕರು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.