‘ಇಂಡಿಯಾ’ ಬಣಕ್ಕೆ ಎಂಎನ್ಎ ಸೇರ್ಪಡೆಗೊಂಡಿಲ್ಲ: ಕಮಲ್ ಹಾಸನ್
ಕಮಲ್ ಹಾಸನ್ | Photo: NDTV
ಚೆನ್ನೈ: ತನ್ನ ಪಕ್ಷ ‘ಮಕ್ಕಳ್ ನೀದಿ ಮೈಯಂ’ (ಎಂಎನ್ಎಂ)ನ ರಾಜಕೀಯ ಮೈತ್ರಿಯ ಕುರಿತು ಮಾತುಕತೆಗಳು ನಡೆಯುತ್ತಿವೆ. ದೇಶದ ಬಗ್ಗೆ ನಿಸ್ವಾರ್ಥವಾಗಿ ಚಿಂತಿಸುವ ಯಾವುದೇ ಬಣವನ್ನು ಪಕ್ಷ ಬೆಂಬಲಿಸಲಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಬುಧವಾರ ಹೇಳಿದ್ದಾರೆ.
ಮಕ್ಕಳ್ ನೀದಿ ಮೈಯಂ’ (ಎಂಎನ್ಎಂ)ನ ಏಳನೇ ವಾರ್ಷಿಕೋತ್ಸವದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂಡಿಯಾ ಮೈತ್ರಿಕೂಟಕ್ಕೆ ಎಂಎನ್ಎಂ ಸೇರ್ಪಡೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಕಮಲ್ ಹಾಸನ್, ‘‘ನಾನು ನಿಮಗೆ ಈಗಾಗಲೇ ಹೇಳಿದ್ದೇನೆ, ಇದು ಪಕ್ಷ ರಾಜಕೀಯವನ್ನು ಬದಿಗಿರಿಸಿ ದೇಶದ ಬಗ್ಗೆ ಚಿಂತಿಸುವ ಸಮಯ. ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಚಿಂತಿಸುವ ಯಾವುದೇ ಪಕ್ಷದೊಂದಿಗೆ ನನ್ನ ಪಕ್ಷ ಕೈಜೋಡಿಸುತ್ತದೆ. ಆದರೆ, ಸ್ಥಳೀಯ ಊಳಿಗಮಾನ್ಯ ರಾಜಕೀಯ ಮಾಡುವ ಪಕ್ಷದೊಂದಿಗೆ ಎಂಎನ್ಎಂ ಕೈಜೋಡಿಸುವುದಿಲ್ಲ’’ ಎಂದು ಅವರು ಹೇಳಿದರು.
ಎಂಎನ್ಎಂನ ರಾಜಕೀಯ ಮೈತ್ರಿಯ ಸಾಧ್ಯತೆ ಕುರಿತ ಪ್ರತಿಕ್ರಿಯಿಸಿದ ಅವರು, ಮಾತುಕತೆ ನಡೆಯುತ್ತಿದೆ. ಈ ವಿಷಯದ ಕುರಿತ ಯಾವುದೇ ಸಿಹಿ ಸುದ್ದಿಯನ್ನು ಮಾಧ್ಯಮಕ್ಕೆ ತಿಳಿಸಲಾಗುವುದು ಎಂದರು.
ಸಣ್ಣ ಪಕ್ಷವಾಗಿರುವ ಹೊರತಾಗಿಯೂ ಎಂಎನ್ಎಂಗೆ ‘ಟಾರ್ಚ್ಲೈಟ್’ ಚಿಹ್ನೆಯನ್ನು ಮಂಜೂರು ಮಾಡಿರುವ ಚುನಾವಣಾ ಆಯೋಗಕ್ಕೆ ಕಮಲ್ ಹಾಸನ್ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಹಿಂದೆ ಮುಂದಿನ ಲೋಕಸಭೆ ಚುನಾವಣೆಗಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆಯೊಂದಿಗೆ ಮೈತ್ರಿ ಮಾತುಕತೆಯಲ್ಲಿ ಕಮಲ್ ಹಾಸನ್ ಅವರ ಪಕ್ಷ ಭಾಗಿಯಾಗಿದೆ ಎಂದು ವದಂತಿಯಾಗಿತ್ತು.