ಮಣಿಪುರ | ಅಸ್ಸಾಂ ರೈಫಲ್ಸ್ನ ತಾತ್ಕಾಲಿಕ ಶಿಬಿರವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ಗುಂಪು
ಸಾಂದರ್ಭಿಕ ಚಿತ್ರ | PC : PTI
ಇಂಫಾಲ: ಶನಿವಾರ ಗುಂಪೊಂದು ಅಸ್ಸಾಂ ರೈಫಲ್ಸ್ನ ತಾತ್ಕಾಲಿಕ ಶಿಬಿರದ ಮೇಲೆ ದಾಳಿ ನಡೆಸಿ, ಅದನ್ನು ಧ್ವಂಸಗೊಳಿಸಿರುವ ಘಟನೆ ಕಾಮ್ಜಾಂಗ್ ಜಿಲ್ಲೆಯಲ್ಲಿ ನಡೆದಿದೆ. ಮರಗಳ ಸಾಗಣೆಗೆ ಕಿರುಕುಳ ನೀಡುತ್ತಾ, ನಿರ್ಬಂಧಗಳನ್ನು ಹೇರಲಾಗಿದೆ ಎಂದು ಆರೋಪಿಸಿ ಉದ್ರಿಕ್ತರ ಗುಂಪು ಈ ಕೃತ್ಯವೆಸಗಿದೆ.
ಅಸ್ಸಾಂ ರೈಫಲ್ಸ್ ತಾತ್ಕಾಲಿಕ ಶಿಬಿರದ ಮೇಲೆ ದಾಳಿ ನಡೆಸಿದ ಗುಂಪಿನ ಸದಸ್ಯರು ನಾಗಾ ಬಾಹುಳ್ಯ ಜಿಲ್ಲೆಯಾದ ಕಾಮ್ಜಾಂಗ್ ಜಿಲ್ಲೆಯ ಕಸೋಮ್ ಖುಲ್ಲೆನ್ ಬ್ಲಾಕ್ಗೆ ಸೇರಿದ್ದಾರೆ.
ಕಸೋಮ್ ಖುಲ್ಲೆನ್ ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ ಮರಮುಟ್ಟುಗಳ ಸಾಗಣೆಗೆ ಅಸ್ಸಾಂ ರೈಫಲ್ಸ್ ಯೋಧರು ನಿರ್ಬಂಧ ಹೇರಿದ್ದಾರೆ ಎಂದು ಆರೋಪಿಸಿ ಶನಿವಾರ ಈ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನಾಕಾರರನ್ನು ಚದುರಿಸಲು ಅಸ್ಸಾಂ ರೈಫಲ್ಸ್ ಯೋಧರು ಜಲಫಿರಂಗಿ ಬಳಸಿದರು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಅವರು ಹೇಳಿದ್ದಾರೆ.
ನಂತರ, ಅಸ್ಸಾಂ ರೈಫಲ್ಸ್ನ ತಾತ್ಕಾಲಿಕ ಶಿಬಿರವನ್ನು ಧ್ವಂಸಗೊಳಿಸಿದ ಉದ್ರಿಕ್ತ ಗುಂಪು, ಅಸ್ಸಾಂ ರೈಫಲ್ಸ್ ಯೋಧರನ್ನು ಆ ಪ್ರದೇಶದಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಯಾವುದೇ ಸಾವು-ನೋವುಗಳಾಗಿಲ್ಲ.