ಹರ್ಯಾಣ: ಜಾನುವಾರು ಕಳ್ಳ ಸಾಗಾಟದ ಆರೋಪ; ವ್ಯಕ್ತಿಯ ಥಳಿಸಿ ಹತ್ಯೆಗೈದ ನಕಲಿ ಗೋರಕ್ಷಕರು

ಗುರುಗ್ರಾಮ: ಜಾನುವಾರು ಕಳ್ಳ ಸಾಗಾಟಗಾರನೆಂದು ಶಂಕಿಸಿ 45 ವರ್ಷದ ವ್ಯಕ್ತಿಯೋರ್ವರನ್ನು ‘ನಕಲಿ ಗೋರಕ್ಷಕರ’ ತಂಡವೊಂದು ಥಳಿಸಿದೆ. ಇದರಿಂದ ಅವರು ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ರವಿವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ವ್ಯಕ್ತಿಯನ್ನು ಹರ್ಯಾಣದ ಪಲ್ವಾಲ್ ಜಿಲ್ಲೆಯ ಮುಂಡ್ಕಾಟಿ ಪೊಲೀಸ್ ಠಾಣಾ ವ್ಯಾಪ್ತಿಯ ಘುದ್ಪುರ ಗ್ರಾಮದ ನಿವಾಸಿ ಯೂಸುಫ್ ಎಂದು ಗುರುತಿಸಲಾಗಿದೆ.
ಈ ಮಾರಕ ದಾಳಿಯ ಹಿಂದೆ ‘ನಕಲಿ ಗೋರಕ್ಷಕರು’ ಇದ್ದಾರೆ ಎಂದು ಆರೋಪಿಸಿ ಯೂಸುಫ್ ಅವರ ಕುಟುಂಬ ಸಲ್ಲಿಸಿದ ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಂಡ್ಕಾಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೂಸುಫ್ ಜಾನುವಾರು ಸಾಕುತ್ತಿದ್ದರು. ಅವರು ಹಾಲಿನ ವ್ಯಾಪಾರ ಮಾಡುತ್ತಿದ್ದರು. ಅವರ ಮನೆಯಲ್ಲಿ ಸುಮಾರು 30 ಜಾನುವಾರುಗಳು ಇವೆ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ಸಂಜೆ ಯೂಸುಫ್ ಅವರು ನಾಗ್ಲಾ ಗ್ರಾಮದಿಂದ ಹಸು ಹಾಗೂ ಕರುವನ್ನು ಖರೀದಿಸಿ ಟೆಂಪೋದಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದರು. ಅವರು ಬೈಕ್ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದರೆ, ಹಸು ಹಾಗೂ ಕರು ಇದ್ದ ಟೆಂಪೊ ಅವರನ್ನು ಹಿಂಬಾಲಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಮಿತ್ರೋಲ್ ಗ್ರಾಮಕ್ಕೆ ತಲುಪುತ್ತಿದ್ದಂತೆ ನಕಲಿ ಗೋರಕ್ಷಕರ ತಂಡವೊಂದು ಟೆಂಪೋವನ್ನು ತಡೆಯಿತು ಹಾಗೂ ಜಾನುವಾರು ಕಳ್ಳ ಸಾಗಾಟ ಮಾಡುತ್ತಿರುವುದಾಗಿ ಚಾಲಕನಿಗೆ ಆರೋಪಿಸಿತು. ಈ ಆರೋಪವನ್ನು ಚಾಲಕ ನಿರಾಕರಿಸಿದಾಗ ತಂಡ ಆತ ಯೂಸುಫ್‌ನನ್ನು ಕರೆಯುವಂತೆ ಮಾಡಿತು. ಯೂಸುಫ್ ಅಲ್ಲಿಗೆ ಬಂದಾಗ ತಂಡ ಮಾರಕವಾಗಿ ಥಳಿಸಿತು. ಇದರಿಂದ ಯೂಸುಫ್ ಗಂಭೀರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರು ಚಿಕಿತ್ಸೆಯ ವೇಳೆ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.
ಯೂಸುಫ್‌ಗೆ ಯಾರೊಂದಿಗೂ ಮನಸ್ತಾಪ ಇರಲಿಲ್ಲ. ಅಲ್ಲದೆ, ಅವರು ಯಾವಾಗಲೂ ತನ್ನ ಹಾಲಿನ ವ್ಯಾಪಾರದಲ್ಲಿ ಬ್ಯುಸಿಯಾಗಿರುತ್ತಿದ್ದರು ಎಂದು ಘುದ್ಪುರ ಗ್ರಾಮದ ಸರಪಂಚರು ತಿಳಿಸಿದ್ದಾರೆ.
ಯೂಸುಫ್ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಯೂಸುಫ್‌ನ ಸಾವಿನ ಹಿನ್ನೆಲೆಯಲ್ಲಿ ಅವರ ಕುಟುಂಬ ಆರ್ಥಿಕ ನೆರವು ನೀಡುವಂತೆ ಸರಕಾರವನ್ನು ಆಗ್ರಹಿಸಿದೆ.