ರಾಂಚಿ: ಮೇಕೆ ಕದ್ದ ಆರೋಪದಲ್ಲಿ ವ್ಯಕ್ತಿಯ ಥಳಿಸಿ ಹತ್ಯೆ
ದೇಶಾದ್ಯಂತ ಹೆಚ್ಚುತ್ತಿರುವ ಗುಂಪು ಹತ್ಯೆ ಪ್ರಕರಣಗಳು
ಸಾಂದರ್ಭಿಕ ಚಿತ್ರ
ರಾಂಚಿ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ದೇಶಾದ್ಯಂತ ಗುಂಪು ಹತ್ಯೆ ಪ್ರಕರಣಗಳು ಏರುಗತಿಯಲ್ಲಿದ್ದು, ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ಮೇಕೆ ಕದ್ದ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸಿ ಹತ್ಯೆಗೈದಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ರಾಂಚಿಯ ಕಟಮುಲ್ಕಿ ಗ್ರಾಮದ ನಿವಾಸಿ ಅಖ್ತರ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ನಿನ್ನೆ ಸಂಜೆ ವಿವಾಹೋತ್ಸವವೊಂದಕ್ಕೆ ಅನ್ಸಾರಿ ತೆರಳಿದ್ದಾಗ, ತಡ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಸ್ಥಳೀಯರ ಪ್ರಕಾರ, ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಅನ್ಸಾರಿಯನ್ನು ತಡೆದಿರುವ ಗುಂಪೊಂದು, ಆತನ ಗುರುತು ಹೇಳುವಂತೆ ಒತ್ತಾಯಿಸಿದೆ. ನಂತರ ಅನ್ಸಾರಿಯ ಮೇಲೆ ಗುಂಪು ತೀವ್ರವಾಗಿ ಹಲ್ಲೆ ನಡೆಸಿದೆ. ಆಗ ಅನ್ಸಾರಿ ನೆರವಿಗಾಗಿ ಕೂಗಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಬೆನ್ನಿಗೇ ದುಷ್ಕರ್ಮಿಗಳ ಗುಂಪು ತೀವ್ರವಾಗಿ ಗಾಯಗೊಂಡಿದ್ದ ಅನ್ಸಾರಿಯನ್ನು ಮತ್ತೊಂದು ಗ್ರಾಮಕ್ಕೆ ಕರೆದೊಯ್ದಿದೆ.
ಸುದ್ದಿ ತಿಳಿದ ಅನ್ಸಾರಿ ಪೋಷಕರು, ನಮ್ಕುಮ್ ಪೊಲೀಸ್ ಠಾಣೆಯ ಅಧಿಕಾರಿಗಳ ಬಳಿ ನೆರವಿಗಾಗಿ ಮೊರೆ ಇಟ್ಟಿದ್ದಾರೆ. ಆದರೆ, ಅವರ ಬೇಡಿಕೆಯನ್ನು ತಳ್ಳಿ ಹಾಕಿರುವ ನಮ್ಕುಮ್ ಠಾಣೆಯ ಪೊಲೀಸರು, ತತಿಸಿಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಅವರಿಗೆ ಸೂಚಿಸಿದ್ದಾರೆ.
ಅನ್ಸಾರಿ ಪೋಷಕರ ಮನವಿಗೆ ಪೊಲೀಸರು ತಕ್ಷಣವೇ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ. ಅನ್ಸಾರಿಯ ಮೃತದೇಹವು ಸೋಮವಾರ ತತಿಸಿಲ್ವೆಯಲ್ಲಿ ಪತ್ತೆಯಾಗಿದೆ.
ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಗುಂಪು ಹತ್ಯೆ ಪ್ರಕರಣಗಳು ಏರುಗತಿಯಲ್ಲಿದ್ದು, ಈ ಪೈಕಿ ಬಹುತೇಕ ಸಂತ್ರಸ್ತರು ಮುಸ್ಲಿಮರು ಆಗಿದ್ದಾರೆ..