ಅಪೌಷ್ಠಿಕತೆ, ಬಡತನ, ಶಿಕ್ಷಣಗಳಲ್ಲಿ ಬಿಹಾರಕ್ಕೆ ಸಮೀಪದಲ್ಲಿರುವ ‘ಮಾದರಿ ರಾಜ್ಯ’ ಗುಜರಾತ್ : ಅಧ್ಯಯನ ವರದಿ

ಹೊಸದಿಲ್ಲಿ: ಗುಜರಾತಿನ ಅಭಿವೃದ್ಧಿ ಮಾದರಿಯು ತನ್ನ ತ್ವರಿತ ಕೈಗಾರಿಕಾ ವಿಸ್ತರಣೆಯ ಮೂಲಕ ಹೆಚ್ಚಿನ ಬೆಳವಣಿಗೆಗೆ ಕಾರಣವಾಗಿದ್ದರೂ ಅದು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನೂ ಉಲ್ಬಣಗೊಳಿಸಿದೆ. ಆರೋಗ್ಯ,ಶಿಕ್ಷಣ ಮತ್ತು ಬಡತನ ನಿರ್ವಹಣೆ ಸೇರಿದಂತೆ ಇತರ ಸೂಚ್ಯಂಕಗಳಲ್ಲಿ ಅದು ತನ್ನ ಆರ್ಥಿಕ ನಿರ್ಬಂಧಗಳ ಹೊರತಾಗಿಯೂ ಸಾಮಾಜಿಕ ವೆಚ್ಚದ ಮೇಲೆ ಗಮನವನ್ನು ಕೇಂದ್ರೀಕರಿಸಿರುವ, ಆದರೆ ಹಿಂದುಳಿದ ರಾಜ್ಯವಾಗಿಯೇ ಮುಂದುವರಿದಿರುವ ಬಿಹಾರಕ್ಕೆ ಹೆಚ್ಚು ಸಮೀಪದಲ್ಲಿದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.
‘ಇಂಡಿಯಾ:ದಿ ಚಾಲೆಂಜ್ ಆಫ್ ಕಾಂಟ್ರಾಸ್ಟೆಡ್ ರೀಜನಲ್ ಡೈನಾಮಿಕ್ಸ್’ ಪ್ರಬಂಧದಲ್ಲಿ ಕ್ರಿಸ್ಟೋಫ್ ಜಫರ್ಲಟ್ ಅವರು ವಿಘ್ನೇಶ್ ರಾಜಮಣಿ ಮತ್ತು ನೀಲ್ ಭಾರದ್ವಾಜ್ ಅವರೊಂದಿಗೆ ‘ಭಾರತದಲ್ಲಿ ವಿಭಿನ್ನ ಭಾರತಗಳನ್ನು’ ನೋಡಲು ಮತ್ತು ಅವುಗಳ ಅಭಿವೃದ್ಧಿ ಪಥಗಳನ್ನು ರೂಪಿಸಿದ ಸಾಮಾಜಿಕ-ಆರ್ಥಿಕ ಮತ್ತು ಆಡಳಿತ ನೀತಿಗಳಲ್ಲಿನ ವ್ಯತ್ಯಾಸಗಳನ್ನು ಹೋಲಿಸಲು ಬಿಹಾರ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳನ್ನು ವಿಶ್ಲೇಷಣೆಗೊಳಪಡಿಸಿದ್ದಾರೆ.
ಬಿಹಾರವು ನಿರಂತರ ಅಭಿವೃದ್ಧಿಯ ಕೊರತೆಯನ್ನು ಎದುರಿಸುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ ಗುಜರಾತ್ ತಲಾದಾಯದ ಲೆಕ್ಕದಲ್ಲಿ ದೇಶದಲ್ಲಿ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಗುಜರಾತಿನ ಅಭಿವೃದ್ಧಿ ಪಥವು ಹೆಚ್ಚು ಬಂಡವಾಳ ಹೂಡಿಕೆಯ ಕೈಗಾರಿಕೆಗಳು,ಮೂಲಸೌಕರ್ಯ ಹೂಡಿಕೆಗಳು ಮತ್ತು ಉದ್ಯಮ ಸ್ನೇಹಿ ನೀತಿಯಿಂದಾಗಿ ತ್ವರಿತ ಕೈಗಾರಿಕಾ ವಿಸ್ತರಣೆಯ ಮಾದರಿಯಾಗಿದೆ. ಆದರೂ ಶಿಕ್ಷಣ ಕ್ಷೇತ್ರದಲ್ಲಿ ಅದರ ಕಡಿಮೆ ಹೂಡಿಕೆಯಿಂದಾಗಿ ಅಸಮಾನತೆಗಳು ಮುಂದುವರಿದಿವೆ ಎಂದು ಅಧ್ಯಯನ ವರದಿಯು ಹೇಳಿದೆ.
ಈ ಮೂರು ರಾಜ್ಯಗಳ ಸಾಮಾಜಿಕ ವೆಚ್ಚ ಮಾದರಿಗಳನ್ನು ಪರಿಶೀಲಿಸಿರುವ ವರದಿಯು,ಇದು ಅವುಗಳ ಆದ್ಯತೆಯನ್ನು ಸೂಚಿಸುತ್ತಿದೆ ಎಂದು ಹೇಳಿದೆ.
ಬಿಹಾರವು ತನ್ನ ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ಈ ಕ್ಷೇತ್ರಗಳಲ್ಲಿ ಭಾರೀ ಹೂಡಿಕೆಗಳನ್ನು ಮಾಡುತ್ತಿದ್ದರೆ ತಮಿಳುನಾಡು ಅದಕ್ಕಿಂತ ಹೆಚ್ಚು ಮೊತ್ತವನ್ನು ಹಂಚಿಕೆ ಮಾಡುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಗುಜರಾತ್ ಹಿಂದುಳಿದಿದೆ. ಶಿಕ್ಷಣ,ಆರೋಗ್ಯ ಮತ್ತು ವಸತಿ ಇತ್ಯಾದಿ ಕ್ಷೇತ್ರಗಳಲ್ಲಿ ಅದರ ಬಜೆಟ್ ಹಂಚಿಕೆ ಕಡಿಮೆಯಾಗಿದ್ದು,ತಮಿಳುನಾಡು ಮಾತ್ರವಲ್ಲ,ಬಿಹಾರದ ಬಜೆಟ್ ಗಿಂತಲೂ ಕಡಿಮೆಯಾಗಿದೆ ಎಂದು ವರದಿಯು ತಿಳಿಸಿದೆ.
ಉದಾಹರಣೆಗೆ ಗುಜರಾತ್ ಶ್ರೀಮಂತ ರಾಜ್ಯವಾಗಿದ್ದರೂ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕಾಗಿ ವೆಚ್ಚ ಮಾಡುವುದರಲ್ಲಿ ಹಿಂದುಳಿದಿದೆ. ಅದು ಬಿಹಾರಕ್ಕಿಂತ ಹೆಚ್ಚಿನ ಹಣವನ್ನು ವೆಚ್ಚ ಮಾಡುತ್ತಿದ್ದರೂ 2012-13 ಮತ್ತು 2019-20ರ ನಡುವಿನ ಅವಧಿಯಲ್ಲಿ ಆರೋಗ್ಯ ರಕ್ಷಣೆಗಾಗಿ ಅದರ ವೆಚ್ಚದಲ್ಲಿ ಕೇವಲ ಶೇ.10.5ರಷ್ಟು ಏರಿಕೆಯಾಗಿತ್ತು, ಇದೇ ಅವಧಿಯಲ್ಲಿ ಬಿಹಾರದಲ್ಲಿ ಇದು ಶೇ.29.5ರಷ್ಟು ಮತ್ತು ತಮಿಳುನಾಡಿನಲ್ಲಿ ಶೇ.20.5ರಷ್ಟು ಏರಿಕೆಯಾಗಿತ್ತು ಎಂದು ವರದಿಯು ಬೆಟ್ಟು ಮಾಡಿದೆ.
ಬಿಹಾರದ ಹೆಚ್ಚಿನ ಸಾಮಾಜಿಕ ವೆಚ್ಚವು ಹಿಂದಿ ಭಾಷಿಕ ರಾಜ್ಯಗಳ ಪೈಕಿ ಅದನ್ನು ವಿಶಿಷ್ಟ ಸ್ಥಾನದಲ್ಲಿರಿಸಿದೆ ಎಂದು ಹೇಳಿರುವ ವರದಿಯು,ಬಿಹಾರವು ನಿರಂತರವಾಗಿ ತನ್ನ ಜಿಡಿಪಿಯ ಹೆಚ್ಚಿನ ಪಾಲನ್ನು ಸಾಮಾಜಿಕ ವೆಚ್ಚಕ್ಕಾಗಿ ಮೀಸಲಿಡುತ್ತಿದ್ದು, ಇದು 2021-22ರಲ್ಲಿ ಶೇ.22.25ರಷ್ಟು ಗಣನೀಯ ಮಟ್ಟಕ್ಕೇರಿತ್ತು. ವ್ಯತಿರಿಕ್ತವಾಗಿ ತನ್ನ ಮೂಲಸೌಕರ್ಯ ಚಾಲಿತ ಅಭಿವೃದ್ಧಿಗಾಗಿ ಹೆಸರಾಗಿರುವ ಗುಜರಾತಿನ ಸಾಮಾಜಿಕ ವೆಚ್ಚವು 2021-22ರಲ್ಲಿ ಅದರ ಜಿಡಿಪಿಯ ಕೇವಲ ಶೇ.4.46ರಷ್ಟಿತ್ತು. ಇದೇ ಅವಧಿಯಲ್ಲಿ ಮಾನವ ಅಭಿವೃದ್ಧಿಯನ್ನು ಕೇಂದ್ರೀಕರಿಸಿದ್ದ ತಮಿಳನಾಡು ಶೇ.4.90 ಮತ್ತು ಶೇ.6.01ರ ನಡುವೆ ವೆಚ್ಚವನ್ನು ಕಾಯ್ದುಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ಸ್ಥಿರವಾದ ಬದ್ಧತೆಯನ್ನು ಪ್ರದರ್ಶಿಸಿತ್ತು ಎಂದು ಹೇಳಿದೆ.
ತಮಿಳುನಾಡು ದಕ್ಷಿಣದ ಇತರ ರಾಜ್ಯಗಳಂತೆ ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡಿದ್ದರೆ ಗುಜರಾತ್ ಮಾದರಿಯು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ಹೇಳಿರುವ ವರದಿಯು,ಬಿಹಾರದ ಹೆಚ್ಚಿನ ವೆಚ್ಚವು ಆರ್ಥಿಕ ನಿರ್ಬಂಧಗಳಿದ್ದರೂ ಸಾಮಾಜಿಕ ವೆಚ್ಚಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಅದಕ್ಕೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿದೆ ಎಂದು ತಿಳಿಸಿದೆ.
ಮೂಲಸೌಕರ್ಯ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಗುಜರಾತ್ ಮತ್ತು ತಮಿಳುನಾಡು ನಡುವೆ ಸಾಮ್ಯತೆಯಿದೆ. ವಿದ್ಯುತ್ ಉತ್ಪಾದನೆ ಮತ್ತು ರಸ್ತೆಗಳ ವಿಷಯದಲ್ಲಿ ಅದು ತಮಿಳುನಾಡಿಗಿಂತ ಮುಂದಿದೆ. ಆದರೆ ಅಪೌಷ್ಠಿಕತೆ, ಬಡತನ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಅದು ಬಿಹಾರಕ್ಕೆ ಸಮೀಪವಿದೆ. ಶಿಕ್ಷಣ ದರವು ಉತ್ತಮವಾಗಿಲ್ಲ, ಕನಿಷ್ಠ ಇಂಗ್ಲಿಷ್ ಮಾಧ್ಯಮ ಶಿಕ್ಷಣವಂತೂ ಅತ್ಯಂತ ಕಳಪೆಯಾಗಿದೆ. ಆಸಕ್ತಕರವಾಗಿ ಇಂದು ಭಾರತದಲ್ಲಿ ಮಾದರಿ ರಾಜ್ಯವಿದ್ದರೆ ಅದು ತಮಿಳನಾಡು ಆಗಿದೆ. ಅದು ಬಡತನವನ್ನು ಹೆಚ್ಚುಕಡಿಮೆ ನಿವಾರಿಸಿದೆ, ಹೆಚ್ಚಿನ ವೇಗದಲ್ಲಿ ಕೈಗಾರೀಕರಣಗೊಂಡಿದೆ. ಇದು ಗುಜರಾತಿನಲ್ಲಿ ಕಾಣುವುದಿಲ್ಲ ಎಂದು ವರದಿಯು ಹೇಳಿದೆ.