2002ರ ಗುಜರಾತ್ ಗಲಭೆ ಕುರಿತು ವಿರೋಧಿಗಳು ಅಪಪ್ರಚಾರ ನಡೆಸಿದರು: ಮೋದಿ
ಅವರಿಗೆ ನಾನು ಶಿಕ್ಷೆಗೊಳಗಾಗುವುದು ಬೇಕಿತ್ತು ಎಂದ ಪ್ರಧಾನಿ

ನರೇಂದ್ರ ಮೋದಿ | PC :PTI
ಹೊಸದಿಲ್ಲಿ: 2002ರಲ್ಲಿ ಗುಜರಾತ್ ನಲ್ಲಿ ನಡೆದ ಗೋಧ್ರೋತ್ತರ ಗಲಭೆಗಳ ಕುರಿತ ಚರ್ಚೆಗಳು ಅಪಪ್ರಚಾರದ ಪ್ರಯತ್ನಗಳ ಭಾಗವಾಗಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ನನ್ನ ರಾಜಕೀಯ ವಿರೋಧಿಗಳು ನನಗೆ ಶಿಕ್ಷೆಯಾಗಬೇಕು ಎಂದು ಬಯಸಿದ್ದರು. ಆದರೆ, ನ್ಯಾಯಾಲಯಗಳು ನನ್ನನ್ನು ದೋಷಮುಕ್ತಗೊಳಿಸಿದವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2002ರಲ್ಲಿ ಗುಜರಾತ್ ನಲ್ಲಿ ನಡೆದ ಗಲಭೆಯು ರಾಜ್ಯದಲ್ಲಿ ಹಿಂದೆಂದೂ ನಡೆದಿರದಂಥ ಬಹು ದೊಡ್ಡ ಗಲಭೆಯಾಗಿತ್ತು ಎಂಬ ಅನಿಸಿಕೆಯು ತಪ್ಪು ಮಾಹಿತಿಯನ್ನು ಹರಡುವ ಪ್ರಯತ್ನವಾಗಿದೆ ಎಂದು ರವಿವಾರ ಪ್ರಸಾರವಾದ ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಹಾಗೂ ಪಾಡ್ ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ರೊಂದಿಗಿನ ಪಾಡ್ ಕಾಸ್ಟ್ ನಲ್ಲಿ ಅವರು ಹೇಳಿದ್ದಾರೆ.
“ನೀವೇನಾದರೂ 2002ರ ಹಿಂದಿನ ದತ್ತಾಂಶಗಳನ್ನು ಪರಾಮರ್ಶಿಸಿದರೆ, ಗುಜರಾತ್ ಈ ಹಿಂದೆ ಕೂಡಾ ಪದೇ ಪದೇ ಗಲಭೆಗಳಿಗೆ ಈಡಾಗಿದ್ದದ್ದನ್ನು ಕಾಣಬಹುದಾಗಿದೆ. ಕೆಲವೆಡೆ ನಿರಂತರವಾಗಿ ಕರ್ಫ್ಯೂ ಹೇರಿರುವುದೂ ತಿಳಿಯುತ್ತದೆ. ಗಾಳಿಪಟ ಹಾರಾಟ ಸ್ಪರ್ಧೆ ಅಥವಾ ಸೈಕಲ್ ಗಳ ನಡುವಿನ ಡಿಕ್ಕಿಯಂಥ ಕ್ಷುಲ್ಲಕ ವಿಷಯಗಳಿಗೂ ಕೋಮು ಹಿಂಸಾಚಾರ ಭುಗಿಲೆದ್ದಿರುವುದನ್ನು ನೋಡಬಹುದಾಗಿದೆ” ಎಂದು ಅವರು ಬೊಟ್ಟು ಮಾಡಿದ್ದಾರೆ.
1969ರಲ್ಲಿ ಗುಜರಾತ್ ನಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಗಲಭೆಗಳು ನಡೆದಿದ್ದವು ಹಾಗೂ ನಾನಾಗ ರಾಜಕೀಯ ವಲಯದಲ್ಲಿ ಇರಲೇ ಇಲ್ಲ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ನಾನು ಗುಜರಾತ್ ವಿಧಾನಸಭೆಗೆ ಶಾಸಕನಾಗಿ ಚುನಾಯಿತನಾದ ಕೇವಲ ಮೂರು ದಿನಗಳಲ್ಲೇ ಗೋಧ್ರಾ ರೈಲು ದಹನ ಘಟನೆ ಸಂಭವಿಸಿತ್ತು ಎಂದು ಅವರು ಹೇಳಿದ್ದಾರೆ.
"ಅದು ಊಹಿಸಲಸಾಧ್ಯವಾದ ಪ್ರಮಾಣದ ದುರ್ಘಟನೆಯಾಗಿತ್ತು. ಜನರು ಜೀವಂತವಾಗಿ ಸುಟ್ಟು ಹೋಗಿದ್ದರು. ಕಂದಹಾರ್ ವಿಮಾನ ಅಪಹರಣ, ಸಂಸತ್ತಿನ ಮೇಲೆ ದಾಳಿ ಅಥವಾ 9/11 ದಾಳಿಯ ಹಿನ್ನೆಲೆಯಲ್ಲಿ, ಜನರು ಜೀವಂತವಾಗಿ ಸುಟ್ಟು ಹೋದಾಗ ಪರಿಸ್ಥಿತಿ ಎಷ್ಟು ಉದ್ವಿಗ್ನ ಹಾಗೂ ಬಿಗುವಾಗಬಹುದು ಎಂಬುದನ್ನು ನೀವು ಊಹಿಸಬಹುದಾಗಿದೆ” ಎಂದು ಅವರು ತಿಳಿಸಿದ್ದಾರೆ.
“ಏನೂ ಆಗಬಾರದಿತ್ತು. ನಾವೂ ಕೂಡಾ ಅದನ್ನೇ ಬಯಸಿದ್ದೆವು. ಶಾಂತಿಯಿರಬೇಕು ಎಂದು ಎಲ್ಲರೂ ಬಯಸುತ್ತಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರಕ್ಕೆ ಗೋಧ್ರಾ ರೈಲು ದಹನವೇ ಮುಖ್ಯ ಕಾರಣವಾಗಿತ್ತು. ಆದರೆ, ಗೋಧ್ರಾ ಪ್ರಕರಣದ ಕುರಿತು ಅಪಪ್ರಚಾರ ನಡೆಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
“ಆದರೆ, ಈ ಕುರಿತು ಸೂಕ್ತ ತನಿಖೆ ನಡೆಸಿದ ನ್ಯಾಯಾಲಯಗಳು, ನಾವು ಸಂಪೂರ್ಣವಾಗಿ ಅಮಾಯಕರು ಎಂಬುದನ್ನು ಪತ್ತೆ ಹಚ್ಚಿದವು. ಈ ಗಲಭೆಗೆ ಯಾರು ನೈಜ ಕಾರಣರಾಗಿದ್ದರೊ, ಅಂಥವರು ನ್ಯಾಯಾಲಯಗಳಿಂದ ಶಿಕ್ಷೆಗೊಳಗಾದರು” ಎಂದು ಮೋದಿ ಹೇಳಿದ್ದಾರೆ.
ಗೋಧ್ರೋತ್ತರ ಗಲಭೆಗಳು ನಡೆದಾಗ ನನ್ನ ರಾಜಕೀಯ ವಿರೋಧಿಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರು ಹಾಗೂ ಈ ಆರೋಪಗಳಲ್ಲಿ ನನಗೆ ಶಿಕ್ಷೆಯಾಗಬೇಕು ಎಂದು ಅವರು ತೀವ್ರ ಆಸಕ್ತಿ ತಳೆದಿದ್ದರು ಎಂದೂ ಅವರು ಆರೋಪಿಸಿದ್ದಾರೆ.
“ಆ ಸಮಯದಲ್ಲಿ ನಮ್ಮ ರಾಜಕೀಯ ವಿರೋಧಿಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರು. ಹೀಗಾಗಿ, ಅವರು ಸಹಜವಾಗಿಯೇ ನಮ್ಮ ವಿರುದ್ಧದ ಎಲ್ಲ ಆರೋಪಗಳು ಸಾಬೀತಾಗಬೇಕು ಎಂದು ಬಯಸಿದ್ದರು. ನಮಗೆ ಶಿಕ್ಷೆಯಾಗಬೇಕು ಎಂದು ಅವರು ಆಶಿಸಿದ್ದರು. ಅವರ ದಣಿವರಿಯದ ಪ್ರಯತ್ನಗಳ ಹೊರತಾಗಿಯೂ, ಅಂದಿನ ಪರಿಸ್ಥಿತಿಯನ್ನು ಎರಡು ಬಾರಿ ನಾಜೂಕಾಗಿ ವಿಶ್ಲೇಷಿಸಿದ್ದ ನ್ಯಾಯಾಲಯಗಳು, ನಾವು ಈ ವಿಷಯದಲ್ಲಿ ಅಮಾಯಕರು ಎಂಬ ತೀರ್ಮಾನಕ್ಕೆ ತಲುಪಿದವು” ಎಂದು ಅವರು ಹೇಳಿದ್ದಾರೆ.
ಬಹುತೇಕ ಪ್ರತಿ ವರ್ಷ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿದ್ದ ಗುಜರಾತ್ ನಲ್ಲಿ 2002ರಿಂದ ಇಲ್ಲಿಯವರೆಗೆ ಯಾವುದೇ ಗಲಭೆಗಳಾಗಿಲ್ಲ. ಕಳೆದ 22 ವರ್ಷಗಳಲ್ಲಿ ಗುಜರಾತ್ ನಲ್ಲಿ ಒಂದೇ ಒಂದು ಪ್ರಮುಖ ಗಲಭೆ ನಡೆದಿಲ್ಲ. ಅಂದಿನಿಂದ ಗುಜರಾತ್ ಶಾಂತಿಯುತವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಮತ ಬ್ಯಾಂಕ್ ರಾಜಕಾರಣವನ್ನು ತಡೆಯಬೇಕು ಎಂಬುದೇ ಯಾವಾಗಲೂ ನನ್ನ ಧೋರಣೆಯಾಗಿದೆ ಎಂದು ಅವರು ಹೇಳಿದ್ದಾರೆ.
“ಎಲ್ಲರ ಜೊತೆ, ಎಲ್ಲರ ವಿಕಾಸ ಮತ್ತು ಎಲ್ಲರ ಪರಿಶ್ರಮ ಎಂಬುದು ನಮ್ಮ ಮಂತ್ರವಾಗಿದೆ. ರಾಜಕೀಯ ಲಾಭಗಳಿಗಾಗಿ ನಮ್ಮ ಹಿಂದಿನ ಆಡಳಿತಗಾರರು ಅನುಸರಿಸಿದ್ದ ತುಷ್ಟೀಕರಣ ರಾಜಕಾರಣದಿಂದ ನಾವು ದೂರ ಸರಿದಿದ್ದೇವೆ ಎಂದೂ ತಮ್ಮ ಸುಮಾರು ಮೂರು ಗಂಟೆಗಳ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗೋಧ್ರೋತ್ತರ ಗಲಭೆಯ ನಂತರ ಕೆಲವರು ನನ್ನ ವರ್ಚಸ್ಸಿಗೆ ಧಕ್ಕೆ ತರಲು ಹೇಗೆಲ್ಲ ಪ್ರಯತ್ನಿಸಿದರು ಎಂಬುದರತ್ತ ಬೊಟ್ಟು ಮಾಡಿರುವ ಮೋದಿ, ಅಂತಿಮವಾಗಿ ನ್ಯಾಯಕ್ಕೇ ಗೆಲುವಾಯಿತು ಹಾಗೂ ನ್ಯಾಯಾಲಯಗಳು ನನ್ನನ್ನು ದೋಷಮುಕ್ತಗೊಳಿಸಿದವು ಎಂದು ಹೇಳಿದ್ದಾರೆ.