ಮೋದಿ ಬಗ್ಗೆ ಪಾಕಿಸ್ತಾನಕ್ಕಿರುವ ಭಯದಿಂದ ಗಡಿ ಶಾಂತಿಯುತವಾಗಿದೆ: ಅಮಿತ್ ಶಾ
ನರೇಂದ್ರ ಮೋದಿ , ಅಮಿತ್ ಶಾ | PTI
ಮೆಂಧರ್: ಪ್ರಧಾನಿ ನರೇಂದ್ರ ಮೋದಿ ಗುಂಡು ಹಾರಿಸಲು ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನ ಭಯಗೊಂಡಿರುವುದರಿಂದ, ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಶಾಂತಿ ನೆಲೆಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಕೇಂದ್ರಾಡಳಿತ ಪ್ರದೇಶವಾದ ಪೂಂಛ್ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುರ್ತಾಝಾ ಖಾನ್ ಪರ ಆಯೋಜನೆಗೊಂಡಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಅಮಿತ್ ಶಾ ಮಾತನಾಡುತ್ತಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಗನ್ ಮತ್ತು ಕಲ್ಲುಗಳ ಸದ್ದನ್ನು ಅಡಗಿಸಿದ್ದು, ಇಲ್ಲಿನ ಯುವಜನರ ಕೈಗೆ ಗನ್ ಮತ್ತು ಕಲ್ಲಿನ ಬದಲು ಲ್ಯಾಪ್ಟಾಪ್ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದೆಂದೂ ಗುಂಡು ಸದ್ದು ಮಾಡಲು ಅವಕಾಶ ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
"ನಾವು ಜನರ ಸುರಕ್ಷತೆಗಾಗಿ ಗಡಿಯಲ್ಲಿ ಇನ್ನೂ ಹೆಚ್ಚು ಬಂಕರ್ಗಳನ್ನು ನಿರ್ಮಿಸಲಿದ್ದೇವೆ. ನಾನು ನಿಮಗೆ 1990ರ ಗಡಿಯಲ್ಲಿನ ಗುಂಡಿನ ಕಾಳಗವನ್ನು ನೆನಪಿಸಲು ಬಯಸುತ್ತೇನೆ. ಈಗೇನಾದರೂ ಗಡಿಯಲ್ಲಿ ಗುಂಡಿನ ಕಾಳಗ ನಡೆಯುತ್ತಿದೆಯೆ?" ಎಂದು ಅವರು ನೆರೆದಿದ್ದವರನ್ನು ಪ್ರಶ್ನಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18ರಂದು ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆದಿದ್ದು, ಎರಡನೆ ಹಂತದ ಚುನಾವಣೆ ಸೆಪ್ಟೆಂಬರ್ 25ರಂದು ನಡೆಯಲಿದೆ.