ʼಫ್ಯಾಸಿಸಂʼ ವಿರೋಧಿ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಸಭಾ ಸಂಸದನಿಗೆ ಅನುಮತಿ ನಿರಾಕರಿಸಿದ ಮೋದಿ ಸರಕಾರ
ವಿದೇಶಾಂಗ ಸಚಿವರಿಗೆ ಪತ್ರ ಬರೆದ ಸಿಪಿಐ(ಎಂ) ನಾಯಕ
ಹೊಸದಿಲ್ಲಿ: ವೆನೆಝುವೆಲಾದಲ್ಲಿ ನಡೆಯಲಿರುವ ಫ್ಯಾಸಿಸಂ ವಿರೋಧಿ ಸಮಾವೇಶದಲ್ಲಿ ಭಾಗವಹಿಸಲು ತೆರಳಲಿರುವ ಸಿಪಿಐ(ಎಂ) ರಾಜ್ಯಸಭಾ ಸಂಸದ ಡಾ.ವಿ.ಶಿವದಾಸನ್‌ಗೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ.
ಶಿವದಾಸನ್ ಅವರು ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿರ್ಧಾರವನ್ನು ವಿರೋಧಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಸಂಸದರಾಗಿರುವ ತಮ್ಮ ಹಕ್ಕುಗಳ ಮೇಲಿನ ದಾಳಿ ಇದು ಎಂದಿರುವ ಅವರು , ಈ ನಿರ್ಧಾರದಿಂದ ತಾನು ದಿಗ್ಭ್ರಮೆಗೊಂಡಿದ್ದೇನೆ ಎಂದು ಹೇಳಿದ್ದಾರೆ.
ನವೆಂಬರ್ 4-6 ರಂದು ವೆನೆಝುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಆಯೋಜಿಸಲಾಗಿರುವ ಫ್ಯಾಸಿಸಂ ವಿರೋಧಿ ಸಮಾವೇಶದಲ್ಲಿ ಹಾಜರಾಗಲು ಅವಕಾಶ ನೀಡದ ಸರ್ಕಾರದ ನಿರ್ಧಾರವು ಆರೆಸ್ಸೆಸ್ - ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಕೇರಳದ ರಾಜ್ಯಸಭಾ ಸದಸ್ಯ ಡಾ.ವಿ.ಶಿವದಾಸನ್ ಸುದ್ದಿಗಾರರಿಗೆ ತಿಳಿಸಿದರು.
ಆರೆಸ್ಸೆಸ್-ಬಿಜೆಪಿ ಸತ್ಯಗಳಿಗೆ ಹೆದರುತ್ತಿದೆ. ವೆನೆಝುವೆಲಾದ ಸಂಸತ್ತಿನಿಂದ ತಮಗೆ ಆಹ್ವಾನ ನೀಡಿರುವ ಸಮಾರಂಭದಲ್ಲಿ ಆರೆಸ್ಸೆಸ್ - ಬಿಜೆಪಿಯ ಬಗ್ಗೆ ಸತ್ಯವನ್ನು ಮಾತನಾಡುವುದನ್ನು ತಡೆಯಲು ಬಯಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಇತ್ತೀಚೆಗೆ ರೂಪುಗೊಂಡ ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಅಲಿಪ್ತ ಚಳುವಳಿ (NAM) ಸೇರಿದಂತೆ ಹಲವು ಬಹುಪಕ್ಷೀಯ ವೇದಿಕೆಗಳಲ್ಲಿ ಎರಡೂ ದೇಶಗಳು ಉತ್ತಮ ಸಂಬಂಧಗಳಿವೆ. ಇದೇ ಸಂದರ್ಭದಲ್ಲಿ ಸಮಾವೇಶದಲ್ಲಿ ಭಾಗವಹಿಸಲು ಅನುಮತಿ ನಿರಾಕರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
" ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಸ್ತಾವನೆಯನ್ನು ಪರಿಶೀಲಿಸಿದೆ. ರಾಜಕೀಯ ದೃಷ್ಟಿ ಕೋನದಿಂದ ಅನುಮತಿ ನಿರಾಕರಿಸಲಾಗಿದೆ,” ಎಂದು ವಿದೇಶಾಂಗ ಸಚಿವಾಲಯವು ಶಿವದಾಸನ್‌ಗೆ ತಿಳಿಸಿದೆ.