ಕಳೆದ ಆರು ದಶಕಗಳಲ್ಲಿಯೇ ಪ್ರಾದೇಶಿಕ ಹಿನ್ನಡೆಯನ್ನು ಮುಚ್ಚಿಹಾಕಲು ಮೋದಿ ಸರಕಾರ ಪ್ರಯತ್ನಿಸುತ್ತಿದೆ: ಜೈರಾಂ ರಮೇಶ್
ಜೈರಾಂ ರಮೇಶ್ | Photo: PTI
ಹೊಸದಿಲ್ಲಿ : ದೇಶದ ವಿರುದ್ಧ ಕಳೆದ ಆರು ದಶಕಗಳಲ್ಲಿಯೇ ಅತ್ಯಂತ ತೀವ್ರ ಪ್ರಾದೇಶಿಕ ಹಿನ್ನಡೆಯನ್ನು ಮುಚ್ಚಿಹಾಕಲು ಸರಕಾರವು ಪ್ರಯತ್ನಿಸುತ್ತಿದೆ ಮತ್ತು ಚೀನಿ ಪಡೆಗಳು ಮೇ 2020ರಿಂದ ಆಯಕಟ್ಟಿನ ಡೆಸ್ಪಾಂಗ್ ಬಯಲು,ಡೆಮ್ಚಕ್ ಮತ್ತು ಉತ್ತರ ಲಡಾಖ್ ಇತರ ಪ್ರದೇಶಗಳಲ್ಲಿ ಭಾರತೀಯ ಪಡೆಗಳು ಗಸ್ತು ಕಾರ್ಯವನ್ನು ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ಗುರುವಾರ ಆರೋಪಿಸಿದ್ದಾರೆ.
ರಮೇಶ x ನಲ್ಲಿ ಲಡಾಖ್ ನ ರಾಜಕಾರಣಿ ಕೊಂಚಾಕ್ ಸ್ಟ್ಯಾಂಝಿನ್ ಅವರ ಪೋಸ್ಟ್ ಉಲ್ಲೇಖಿಸಿದ್ದಾರೆ. ಚೀನಾದೊಂದಿಗೆ ಸೇನೆಯನ್ನು ಹಿಂದೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಭಾರತೀಯ ಸೇನೆಯು ಲಡಾಖ್ ನಲ್ಲಿ 1962ರ ಭಾರತ-ಚೀನಾ ಸಂಘರ್ಷದ ರೆಝಾಂಗ್ ಲಾ ಯುದ್ಧದ ಸ್ಥಳದಲ್ಲಿಯ ಹುತಾತ್ಮ ಮೇಜರ್ ಶೈತಾನ್ ಸಿಂಗ್ ಅವರು ಸ್ಮಾರಕವನ್ನು ಕೆಡವಿದೆ ಎಂದು ಸ್ಟ್ಯಾಂಝಿನ್ ತನ್ನ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಸ್ಟ್ಯಾಂಝಿನ್ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿಯಲ್ಲಿ ಚುಷೂಈಲ್ನ ಕೌನ್ಸಿಲರ್ ಆಗಿದ್ದಾರೆ.
ಭಾರತವು 2021ರಲ್ಲಿ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಮೀಸಲು ವಲಯದಲ್ಲಿ ಈ ಸ್ಮಾರಕವಿತ್ತು. ಅದನ್ನು ಕೆಡವುವ ಮೂಲಕ ಮೇಜರ್ ಸಿಂಗ್ ಮತ್ತು ಇತರ ಹುತಾತ್ಮರ ನೆನಪಿಗೆ ಭಾರೀ ಅವಮಾನವಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಮೋದಿ ಸರಕಾರವು ಒಪ್ಪಂದ ಮಾಡಿಕೊಂಡಿರುವ ಮೀಸಲು ವಲಯಗಳು ಹಿಂದೆ ಭಾರತದ ನಿಯಂತ್ರಣದಲ್ಲಿಯೇ ಇದ್ದವು ಮತ್ತು ಈ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ ಮೋದಿ ಸರಕಾರವು ನಾಚಿಕೆಗೇಡಿನ ಕೆಲಸವನ್ನು ಮಾಡಿದೆ ಎಂದಿದ್ದಾರೆ.