ಮೋದಿ ಸರಕಾರ ‘ನವ-ಫ್ಯಾಸಿಸ್ಟ್’ ಅಲ್ಲ: ಇತರ ಎಡಪಕ್ಷಗಳ ನಿಲುವಿನಿಂದ ದೂರ ಸರಿದ ಸಿಪಿಎಂ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಎಪ್ರಿಲ್ನಲ್ಲಿ ನಡೆಯಲಿರುವ ಪಕ್ಷದ 24ನೇ ಮಹಾಧಿವೇಶನಕ್ಕಾಗಿ ಕರಡು ರಾಜಕೀಯ ನಿರ್ಣಯಕ್ಕೆ ಅನಿರೀಕ್ಷಿತ ವಿವರಣೆಯಲ್ಲಿ ಸಿಪಿಎಂ ಕೇಂದ್ರ ನಾಯಕತ್ವವು ಮೋದಿ ಸರಕಾರ ಅಥವಾ ಭಾರತ ಸರಕಾರವನ್ನು ‘ಫ್ಯಾಸಿಸ್ಟ್ ಅಥವಾ ನವ-ಫ್ಯಾಸಿಸ್ಟ್’ ಎಂದು ಪಕ್ಷವು ಪರಿಗಣಿಸುವುದಿಲ್ಲ ಎಂದು ತನ್ನ ರಾಜ್ಯ ಘಟಕಗಳಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಇದು ಇತರ ಪ್ರಮುಖ ಎಡಪಕ್ಷಗಳ ನಿಲುವುಗಳಿಗಿಂತ ಭಿನ್ನವಾಗಿದೆ. ಸಿಪಿಐ ಮೋದಿ ಆಡಳಿತವನ್ನು ‘ಫ್ಯಾಸಿಸ್ಟ್ ಸರಕಾರ’ ಎಂದು ಬಣ್ಣಿಸಿದ್ದರೆ, ಸಿಪಿಐ(ಎಂಎಲ್)ಎಲ್ ‘ಭಾರತೀಯ ಫ್ಯಾಸಿಸಂ ಅನ್ನು ಜಾರಿಗೆ ತರಲಾಗಿದೆ’ ಎಂದು ಹೇಳುತ್ತಿದೆ. ಪಕ್ಷದ ಇತ್ತೀಚಿನ ಹೇಳಿಕೆಯು ಸಿಪಿಎಂನಲ್ಲಿ ಇನ್ನಷ್ಟು ಚರ್ಚೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ.
ಬಿಜೆಪಿ-ಆರೆಸ್ಸೆಸ್ ಅನ್ನು ಹಿಮ್ಮೆಟ್ಟಿಸದಿದ್ದರೆ ಮತ್ತು ತಡೆಯದಿದ್ದರೆ ಹಿಂದುತ್ವ ಕಾರ್ಪೊರೇಟ್ ಸರ್ವಾಧಿಕಾರತ್ವವು ನವ-ಫ್ಯಾಸಿಸಂ ಕಡೆಗೆ ಸಾಗುವ ಅಪಾಯವನ್ನು ಮಾತ್ರ ನಿರ್ಣಯವು ಉಲ್ಲೇಖಿಸಿದೆ ಎಂದು ಸಿಪಿಎಂ ಕೇಂದ್ರ ನಾಯಕತ್ವವು ರಾಜ್ಯ ಘಟಕಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದೆ. ಪ್ರಾಸಂಗಿಕವಾಗಿ, ಕರಡು ನಿರ್ಣಯವು ಬಿಜೆಪಿಯನ್ನು ‘ಫ್ಯಾಸಿಸ್ಟ್ ಆರೆಸ್ಸೆಸ್’ನ ರಾಜಕೀಯ ಮುಖವಾಡ ಎಂದೂ ಬಣ್ಣಿಸಿದೆ.
ಬಿಜೆಪಿ-ಆರೆಸ್ಸಸ್ನಡಿ ರಾಜಕೀಯ ವ್ಯವಸ್ಥೆಯು ‘ನವ-ಫ್ಯಾಸಿಸ್ಟ್ ಗುಣಲಕ್ಷಣಗಳನ್ನು’ ಪ್ರದರ್ಶಿಸುತ್ತಿದೆ ಎಂದು ಕರಡು ನಿರ್ಣಯವು ಎತ್ತಿ ತೋರಿಸಿದೆ. ‘ಗುಣಲಕ್ಷಣಗಳು’ ಸರಕಾರ ಅಥವಾ ರಾಜಕೀಯ ವ್ಯವಸ್ಥೆ ನವ-ಫ್ಯಾಸಿಸ್ಟ್ ಆಗಿರದಿದ್ದರೂ ಅಂತಹ ಅಪಾಯದತ್ತ ಸಾಗುವ ಪ್ರವೃತ್ತಿಯನ್ನು ಸೂಚಿಸುತ್ತವೆ ಎಂದು ಪತ್ರದಲ್ಲಿ ಹೇಳಲಾಗಿದೆ.
‘ಮೋದಿ ಆಡಳಿತವನ್ನು ಫ್ಯಾಸಿಸ್ಟ್ ಅಥವಾ ನವ-ಫ್ಯಾಸಿಸ್ಟ್ ಎಂದು ನಾವು ಹೇಳುತ್ತಿಲ್ಲ, ಭಾರತ ಸರಕಾರವನ್ನು ನವ-ಫ್ಯಾಸಿಸ್ಟ್ ಎಂದೂ ನಾವು ಹೇಳುತ್ತಿಲ್ಲ’ ಎಂದು ನವ-ಫ್ಯಾಸಿಸಂ ಪದದ ಬಳಕೆ ಕುರಿತು ಟಿಪ್ಪಣಿಯಲ್ಲಿ ಹೇಳಲಾಗಿದೆ.
‘ಆರೆಸ್ಸೆಸ್ನ ರಾಜಕೀಯ ಘಟಕವಾಗಿರುವ ಬಿಜೆಪಿಯ ಹತ್ತು ವರ್ಷಗಳ ನಿರಂತರ ಆಡಳಿತದ ಬಳಿಕ ರಾಜಕೀಯ ಬಿಜೆಪಿ-ಆರೆಸ್ಸೆಸ್ ಕೈಯಲ್ಲಿ ಅಧಿಕಾರವು ಕ್ರೋಡಿಕರಣಗೊಂಡಿದೆ ಮತ್ತು ಇದು ನವ-ಫ್ಯಾಸಿಸ್ಟ್ ಗುಣಲಕ್ಷಣಗಳ ಅಭಿವ್ಯಕ್ತಿಗೆ ಕಾರಣವಾಗುತ್ತಿದೆ ಎನ್ನುವುದನ್ನು ನಾವು ಒತ್ತಿ ಹೇಳುತ್ತಿದ್ದೇವೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಿಜೆಪಿಯ ಸ್ವರೂಪವನ್ನು ನಿರ್ಧರಿಸುವ ಬಗ್ಗೆ ಸಿಪಿಎಂ ತೀವ್ರ ಆಂತರಿಕ ಚರ್ಚೆಗಳಿಗೆ ಸಾಕ್ಷಿಯಾಗಿತ್ತು. ಆಗಿನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಬಿಜೆಪಿ-ಆರೆಸ್ಸೆಸ್ ಅನ್ನು ಫ್ಯಾಸಿಸ್ಟ್ ಎಂದು ಬಣ್ಣಿಸಿದ್ದರೆ ಪ್ರಕಾಶ ಕಾರಟ್ ಬಣವು ಬಿಜೆಪಿ ಸ್ವರೂಪದಲ್ಲಿ ಕೇವಲ ಸರ್ವಾಧಿಕಾರಿಯಾಗಿದೆ ಎಂದು ವಾದಿಸಿದ್ದರು. ಕಳೆದ ಸೆಪ್ಟಂಬರ್ನಲ್ಲಿ ಯೆಚೂರಿಯವರ ನಿಧನದ ಬಳಿಕ ಕಾರಟ್ ಪ್ರಸ್ತುತ ಸಿಪಿಎಂ ಪಾಲಿಟ್ಬ್ಯೂರೊದ ಸಂಯೋಜಕರಾಗಿದ್ದಾರೆ.
ಮೋದಿ ಸರಕಾರವನ್ನು ವ್ಯಾಖ್ಯಾನಿಸುವಲ್ಲಿ ಗಮನಾರ್ಹ ಬದಲಾವಣೆಯನ್ನು ಪಕ್ಷದ ಮಹಾಧಿವೇಶನವು ಅನುಮೋದಿಸಿದರೆ ಅದು ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ನೊಂದಿಗೆ ಸಿಪಿಎಂ ಸಂಬಂಧದಲ್ಲಿ ಬದಲಾವಣೆಗೆ ಕಾರಣವಾಗಲಿದೆ ಎಂದು ಮೂಲಗಳು ಸೂಚಿಸಿವೆ.