ʼಅಗ್ನಿಪಥʼದ ಮೂಲಕ ಮೋದಿ ಸರಕಾರವು ರಾಷ್ಟ್ರೀಯ ಭದ್ರತೆ ಹಾಗೂ ಯುವಕರೊಂದಿಗೆ ಆಟವಾಡುತ್ತಿದೆ : ಕಾಂಗ್ರೆಸ್ ಆರೋಪ
ಜೈರಾಮ್ ರಮೇಶ್ | PTI
ಹೊಸ ದಿಲ್ಲಿ: ಅಗ್ನಿಪಥ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮೋದಿ ಸರಕಾರವು ರಾಷ್ಟ್ರೀಯ ಭದ್ರತೆ ಹಾಗೂ ಯುವಕರೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಸಂದೇಶವನ್ನು ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಈ ಯೋಜನೆಯು ನಿರ್ಗಮಿಸುತ್ತಿರುವ ಪ್ರಧಾನಿಯ ಕೊಡುಗೆ’ ಎಂದು ವ್ಯಂಗ್ಯವಾಡಿದ್ದಾರೆ.
“ಈ ಯೋಜನೆಯು ರಾಷ್ಟ್ರೀಯ ಭದ್ರತೆ ಹಾಗೂ ಯುವಜನರ ಭವಿಷ್ಯದೊಂದಿಗೆ ಆಟವಾಡುತ್ತಿದೆ. ಅಗ್ನಿಪಥ ಯೋಜನೆಯು ಜಾರಿಯಾಗುವುದಕ್ಕೂ ಮುನ್ನ, ಪ್ರತಿ ವರ್ಷ 75,000 ಯುವಕರು ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗುತ್ತಿದ್ದರು. ಆದರೀಗ ಅದರ ಪ್ರಮಾಣ ಶೇ. 25ರಷ್ಟಕ್ಕೆ ಕುಸಿದಿದೆ” ಎಂದು ಅವರು ಆರೋಪಿಸಿದ್ದಾರೆ.
अग्निपथ योजना राष्ट्रीय सुरक्षा और हमारे युवाओं के भविष्य के साथ खिलवाड़ है। इसे निवर्तमान प्रधानमंत्री नरेंद्र मोदी ने बिना किसी विचार-विमर्श के लाया है। सेना ने भी इसपर अपनी सहमति नहीं जताई थी। इस नीति ने चीन के ख़िलाफ़ हमारी क्षमताओं के साथ समझौता किया है। अग्निपथ पर मेरा… pic.twitter.com/NUb4a7AJNs
— Jairam Ramesh (@Jairam_Ramesh) May 27, 2024
ಅಗ್ನಿಪಥ ಯೋಜನೆಯಲ್ಲಿ ಯುವಕರಿಗೆ ಆರು ತಿಂಗಳ ತರಬೇತಿ ನೀಡಿ, ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಹೋರಾಡುವಂತೆ ಸೂಚಿಸಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜೂನ್ 2020ರ ಹೇಳಿಕೆಯನ್ನು ಮತ್ತೆ ನೆನಪಿಸಿರುವ ಜೈರಾಮ್ ರಮೇಶ್, ಚೀನಾಗೆ ಕ್ಲೀನ್ ಚಿಟ್ ನೀಡಿದ್ದರಿಂದ ಭಾರತದ ಚೌಕಾಸಿ ಸಾಮರ್ಥ್ಯವು ಕುಗ್ಗಿದೆ ಎಂದೂ ದೂರಿದ್ದಾರೆ.