ಯುವಜನರನ್ನು ನಿರುದ್ಯೋಗಿಗಳನ್ನಾಗಿ ಇರಿಸುವುದೇ ಮೋದಿ ಸರಕಾರದ ಏಕೈಕ ಯೋಜನೆ : ಖರ್ಗೆ ಆರೋಪ
ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ: ಯುವ ಜನರನ್ನು ನಿರುದ್ಯೋಗಿಗಳನ್ನಾಗಿ ಇರಿಸುವುದೇ ನರೇಂದ್ರ ಮೋದಿ ಸರಕಾರದ ಏಕೈಕ ಯೋಜನೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ನಿರುದ್ಯೋಗದ ಕುರಿತು ಕೇಂದ್ರ ಸರಕಾರವನ್ನು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿರುವ ಖರ್ಗೆ, ನಿರುದ್ಯೋಗದ ಕುರಿತಂತೆ ಸಿಟಿ ಗ್ರೂಪ್ನಂತಹ ಸಂಸ್ಥೆಗಳ ಸ್ವತಂತ್ರ್ಯ ಆರ್ಥಿಕ ವರದಿಗಳನ್ನು ಮೋದಿ ಸರಕಾರ ನಿರಾಕರಿಸಬಹುದು. ಆದರೆ, ಸರಕಾರದ ದತ್ತಾಂಶವನ್ನು ನಿರಾಕರಿಸುವುದು ಹೇಗೆ ? ಎಂದು ವಿವಿಧ ವರದಿಗಳನ್ನು ಉಲ್ಲೇಖಿಸಿದ ‘ಎಕ್ಸ್’ನ ದೀರ್ಘ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.
‘‘ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ಯುವ ಜನರ ಕನಸು ಭಗ್ನಗೊಂಡಿರುವುದಕ್ಕೆ ಮೋದಿ ಸರಕಾರ ಏಕೈಕ ಹೊಣೆ ಎಂಬುದು ಸತ್ಯ. ಮೋದಿ ಸರಕಾರದ ಪ್ರತಿಪಾದನೆಯನ್ನು ಇತ್ತೀಚೆಗಿನ ಸರಕಾರಿ ದತ್ತಾಂಶ ಸುಳ್ಳು ಎಂದು ಹೇಳುತ್ತವೆ’’ ಎಂದು ಅವರು ತಿಳಿಸಿದ್ದಾರೆ.
ಎನ್ಎಸ್ಎಸ್ಒ (ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್)ದ ಉತ್ಪಾದನಾ ವಲಯದಲ್ಲಿ ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ ಪ್ರಕಾರ 2015 ಹಾಗೂ 2023ರ ನಡುವೆ 7 ವರ್ಷಗಳಲ್ಲಿ ಅಸಂಘಟಿತ ವಲಯಗಳ ಘಟಕಗಳಲ್ಲಿ 54 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದಾದ್ಯಂತ ಅಸಂಘಟಿತ, ಕೃಷಿ ಉದ್ಯಮವಲ್ಲದ ಉದ್ಯಮಗಳಲ್ಲಿ 2010-11ರಲ್ಲಿ 10.80 ಕೋಟಿ ಉದ್ಯೋಗಿಗಳು ಉದ್ಯೋಗಿಗಳಾಗಿದ್ದಾರೆ. ಇದು 2022-23ರಲ್ಲಿ 10.96 ಕೋಟಿಗೆ ತಲುಪಿತು. ಈ 12 ವರ್ಷಗಳಲ್ಲಿ ಕೇವಲ 16 ಲಕ್ಷ ಕನಿಷ್ಠ ಏರಿಕೆಯಾಗಿದೆ ಎಂದು ಖರ್ಗೆ ತಿಳಿಸಿದ್ದಾರೆ.
ಇಪಿಎಫ್ಒ ದತ್ತಾಂಶವನ್ನು ತೋರಿಸುವ ಮೂಲಕ ಔಪಚಾರಿಕ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಮೋದಿ ಸರಕಾರ ಹೇಳುತ್ತಿದೆ. ಆದರೆ, ನಾವು ಈ ದತ್ತಾಂಶ ನಿಜ ಎಂದು ನಂಬಿದರೂ 2023ರಲ್ಲಿ ಹೊಸ ಉದ್ಯೋಗದಲ್ಲಿ ಶೇ. 10 ಇಳಿಕೆಯಾಗಿರುವುದನ್ನು ಕಾಣಬಹುದು ಎಂದು ಖರ್ಗೆ ಹೇಳಿದರು.