ನಾಗರಿಕ ಸಂಹಿತೆ ಕೋಮವಾದಿ ಎಂದು ಪ್ರತಿಪಾದಿಸಿ ಮೋದಿಯಿಂದ ಅಂಬೇಡ್ಕರ್ ಗೆ ಅವಮಾನ : ಕಾಂಗ್ರೆಸ್
ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರು ‘ಕೋಮುವಾದಿ ನಾಗರಿಕ ಸಂಹಿತೆ’ಯಲ್ಲಿ ಜೀವಿಸುತ್ತಿದ್ದಾರೆ ಎಂದು ಹೇಳಿರುವುದು ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿರುವ ‘ಘೋರ ಅವಮಾನ’ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.
ದಿಲ್ಲಿಯ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಮೋದಿ ಅವರು, ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆಯ ಅನುಷ್ಠಾನದ ಕುರಿತ ಚರ್ಚೆಗೆ ಕರೆ ನೀಡಿದ್ದರು ಹಾಗೂ ಅದು ಜಾತ್ಯತೀತವಾಗುವ ಹಾಗೂ ತಾರತಮ್ಯ ರಹಿತವಾಗುವ ಅಗತ್ಯತೆ ಇತ್ತು ಎಂದು ಹೇಳಿದ್ದರು.
ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಇಂದಿನ ವರೆಗೆ ದೇಶ ಕೋಮುವಾದಿ ನಾಗರಿಕ ಸಂಹಿತೆಯೊಂದಿಗೆ ಜೀವಿಸುತ್ತಿದೆ ಎಂಬ ಪ್ರತಿಪಾದನೆ ಡಾ. ಅಂಬೇಡ್ಕರ್ ಅವರಿಗೆ ಮಾಡುವ ಘೋರ ಅವಮಾನ ಎಂದಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ವೈಯುಕ್ತಿಕ ಕಾನೂನಿನ ಬದಲಾವಣೆಗಾಗಿ ಹೋರಾಟ ಮಾಡಿದರು. ಅದು 1950ರಲ್ಲಿ ಕಾರ್ಯ ರೂಪಕ್ಕೆ ಬಂತು. ಈ ಬದಲಾವಣೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಜನ ಸಂಘ ತೀವ್ರವಾಗಿ ವಿರೋಧಿಸಿತು ಎಂದು ಅವರು ಹೇಳಿದ್ದಾರೆ.
ಇತಿಹಾಸವನ್ನು ತಿರುಚುವ ಪ್ರಧಾನಿ ಅವರ ಸಾಮರ್ಥ್ಯಕ್ಕೆ ಮಿತಿಯೇ ಇಲ್ಲ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.