ಹಿಮಂತ ಬಿಸ್ವ ಶರ್ಮ ಮೋದಿಯ ಚೇಲಾ: ಅಸ್ಸಾಂ ಸಿಎಂ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆ (PTI)
ನಾಗಾಂವ್ (ಅಸ್ಸಾಂ): ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮೋದಿಯ ಚೇಲಾ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಹಿಮಂತ ಬಿಸ್ವ ಶರ್ಮ ದೇಶದ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಕುರಿತು ಭೀತಿಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ಅಸ್ಸಾಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಆರೋಪದ ಬೆನ್ನಿಗೇ ಖರ್ಗೆಯವರಿಂದ ಈ ತೀಕ್ಷ್ಣ ವಾಗ್ದಾಳಿ ನಡೆದಿದೆ.
ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, “ಭಾರತ್ ಜೋಡೊ ನ್ಯಾಯ ಯಾತ್ರೆ 15 ರಾಜ್ಯಗಳಲ್ಲಿ ಹಾದು ಹೋಗಲಿದೆ. ಇದಕ್ಕೂ ಮುನ್ನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೊ ಯಾತ್ರೆ ಹಾದು ಹೋಗಿತ್ತು. ಆ ಸಂದರ್ಭದಲ್ಲಿ ಯಾವುದೇ ಕಲ್ಲೆಸೆತ ಪ್ರಕರಣಗಳು ನಡೆದಿರಲಿಲ್ಲ. ಭೀತಿಗೊಳಿಸುವ ಯಾವುದೇ ಪ್ರಯತ್ನಗಳು ಆಗಿರಲಿಲ್ಲ. ಆದರೆ, ಈಗೇಕೆ ಅಸ್ಸಾಂನಲ್ಲಿ ಅಂತಹ ಪ್ರಯತ್ನಗಳು ನಡೆಯುತ್ತಿವೆ? ಯಾಕೆಂದರೆ, ಆತ (ಅಸ್ಸಾಂ ಮುಖ್ಯಮಂತ್ರಿ) ಪ್ರಧಾನಿ ನರೇಂದ್ರ ಮೋದಿಯ ಚೇಲಾ ಆಗಿದ್ದಾರೆ. ಆತ ಶಾ ಏನು ಹೇಳುತ್ತಾರೆ ಅದನ್ನು ಕೇಳುತ್ತಾರೆ. ಆತ ದೇಶದ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಬಗ್ಗೆ ಭೀತಿಗೊಂಡಿದ್ದಾರೆ. ಜನರನ್ನು ಬೆದರಿಸುವ ಮೂಲಕ ಮುಂದಿನ ಚುನಾವಣೆಗಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹರಿಹಾಯ್ದಿದ್ದಾರೆ.
ಹಿಮಂತ ಬಿಸ್ವ ಶರ್ಮ ಹಾಗೂ ಕಾಂಗ್ರೆಸ್ ನಡುವೆ ಹದಗೆಟ್ಟಿರುವ ಸಂಬಂಧವನ್ನು ವಿವರಿಸಲು ತಮ್ಮ ಭಾಷಣದಲ್ಲಿ ಬೆಕ್ಕಿನ ಹೋಲಿಕೆಯನ್ನೂ ನೀಡಿದ ಖರ್ಗೆ, “ಇದು ಒಂದು ರೀತಿ ನಮ್ಮ ಬೆಕ್ಕು ನಮ್ಮನ್ನು ನೋಡಿ ಮಿಯಾಂವ್ ಎಂದಂತೆ. ನಾವು ಇಂತಹ ಅನೇಕ ಜನರನ್ನು ನೋಡಿದ್ದೇವೆ. ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಹಾಗೂ ಇದು ಕಾಂಗ್ರೆಸ್ ನ ಭರವಸೆ” ಎಂದು ಅಭಯ ನೀಡಿದ್ದಾರೆ.
ಇದಕ್ಕೂ ಮುನ್ನ, ಸೋನಿತ್ಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಕಾರು ಹಾಗೂ ಭಾರತ್ ಜೋಡೊ ನ್ಯಾಯ ಯಾತ್ರೆಯೊಂದಿಗೆ ಸಾಗುತ್ತಿದ್ದ ಛಾಯಾಗ್ರಾಹಕರ ಮೇಲೆ ಬಿಜೆಪಿ ಕಾರ್ಯಕರ್ತರು ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.