ಮೋದಿ, ಮಹಾರಾಷ್ಟ್ರ ಮತ್ತು ಚುನಾವಣೆ
ಲೋಕಸಭೆಗೂ ಮುನ್ನ ಪ್ರಮುಖ ಕ್ಷೇತ್ರಗಳಿಗೆ ಭೇಟಿ ನೀಡಲಿರುವ ಪ್ರಧಾನಿ
ನರೇಂದ್ರ ಮೋದಿ | Photo: PTI
ಮುಂಬೈ: ಕಳೆದ ಕೆಲವು ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಯೋಜನೆಗಳನ್ನು ಉದ್ಘಾಟಿಸಲು ಎರಡನೆಯ ಬಾರಿಗೆ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ದೇಶದ ಅತ್ಯಂತ ಉದ್ದನೆಯ ಅಟಲ್ ಸೇತು ಸೇತುವೆ ಉದ್ಘಾಟಿಸಿ, ರೂ. 15,000 ಕೋಟಿ ಮೊತ್ತದ ಸರ್ಕಾರಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ ಒಂದು ವಾರಕ್ಕೆ ಸರಿಯಾಗಿ ಶುಕ್ರವಾರದಂದು ದೇಶದಲ್ಲೇ ಅತ್ಯಂತ ಅಗ್ಗದ ವೆಚ್ಚದ ವಸತಿ ಯೋಜನೆ ಎಂದು ಹೇಳಲಾಗಿರುವ ಸೋಲಾಪುರದಲ್ಲಿನ ವಸತಿ ಯೋಜನೆಯನ್ನು ಉದ್ಘಾಟಿಸುವುದರೊಂದಿಗೆ ಸುಮಾರು ರೂ. 2000 ಕೋಟಿ ವೆಚ್ಚದ ಎಂಟು ಅಮೃತ್ (ಅಟಲ್ ಪುನರುಜ್ಜೀವನ ಮತ್ತು ನಗರ ಪರಿವರ್ತನೆ ಯೋಜನೆ)ಗೆ ಶಿಲಾನ್ಯಾಸ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು indianexpress.com ವರದಿ ಮಾಡಿದೆ.
ಉತ್ತರ ಪ್ರದೇಶದ (80) ನಂತರ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರ(48)ದಲ್ಲಿ ತನ್ನ ಸ್ಥಿತಿಯನ್ನು ಸುಭದ್ರಪಡಿಸಿಕೊಂಡು, ಗರಿಷ್ಠ ಪ್ರಮಾಣದ ಸ್ಥಾನಗಳನ್ನು ಜಯಿಸಲು ಬಿಜೆಪಿಯು ಪ್ರಯತ್ನಿಸುತ್ತಿದೆ ಎಂಬುದು ಪ್ರಧಾನಿಯು ಪದೇ ಪದೇ ಮಹಾರಾಷ್ಟ್ರಕ್ಕೆ ನೀಡುತ್ತಿರುವ ಭೇಟಿಯಿಂದ ವೇದ್ಯವಾಗುತ್ತಿದೆ. ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಮಹಾರಾಷ್ಟ್ರದಲ್ಲಿ 45ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಿಸುವ ಗುರಿಯನ್ನು ಬಿಜೆಪಿ ನಿಗದಿಪಡಿಸಿಕೊಂಡಿದೆ ಎಂದು ಹೇಳಲಾಗಿದೆ. ಕಳೆದ ಎರಡು ಚುನಾವಣೆಗಳಲ್ಲಿ ಮೈತ್ರಿ ಪಕ್ಷಗಳಾಗಿದ್ದ ಬಿಜೆಪಿ ಮತ್ತು ಶಿವಸೇನೆಯು 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಶಿವಸೇನೆ ಮತ್ತು ಎನ್ಸಿಪಿಗಳೆರಡೂ ವಿಭಜನೆಯಿಂದ ದುರ್ಬಲಗೊಂಡಿರುವುದರಿಂದ, ಎಲ್ಲ ಜವಾಬ್ದಾರಿಯನ್ನೂ ರಾಜ್ಯ ನಾಯಕತ್ವದ ಮೇಲೆಯೇ ಬಿಡಲೊಲ್ಲದ ಬಿಜೆಪಿಯು, ಲೋಕಸಭಾ ಚುನಾವಣೆಗೂ ಮುನ್ನವೇ ವಿರೋಧ ಪಕ್ಷಗಳ ವಿರುದ್ಧ ಏಕಪಕ್ಷೀಯ ಮೇಲುಗೈ ಸಾಧಿಸಲು ಬಯಸಿದೆ.
ತಮ್ಮ ಕಳೆದ ಭೇಟಿಗಳಲ್ಲಿ ಪ್ರಧಾನಿ ಮೋದಿ ನಾಗಪುರ, ಪುಣೆ, ಅಹಮದ್ ನಗರ್, ಶಿರ್ಡಿ, ನಾಶಿಕ್, ಸಿಂಧುದುರ್ಗ, ಹಾಗೂ ಸೋಲಾಪುರದಂಥ 15 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದರು. ಈ ಭೇಟಿಗಳಲ್ಲಿ ಮುಂಬೈ ದಕ್ಷಿಣ, ಮುಂಬೈ ಉತ್ತರ, ಮುಂಬೈ, ಮಧ್ಯ ದಕ್ಷಿಣ, ಮುಂಬೈ, ಮುಂಬೈ ಈಶಾನ್ಯ ಮತ್ತು ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರಗಳೂ ಸೇರಿದ್ದವು. ಕಳೆದ ವಾರ ನವಿ ಮುಂಬೈಗೆ ಪ್ರಧಾನಿ ನೀಡಿದ್ದ ಭೇಟಿಯಿಂದ ಥಾಣೆ ಹಾಗೂ ರಾಯಗಢ ಲೋಕಸಭಾ ಕ್ಷೇತ್ರಗಳ ಮೇಲೆ ಪರಿಣಾಮ ಉಂಟಾಗಬಹುದು ಎಂದು ಬಿಜೆಪಿಯು ಅಂದಾಜಿಸಿದೆ.
ಜೂನ್ 2022ರಲ್ಲಿ ಏಕನಾಥ್ ಶಿಂದೆ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗ ಪ್ರಥಮ ಬಾರಿಗೆ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಆ ಭೇಟಿಯ ನಂತರ ಕಳೆದ 13 ತಿಂಗಳಲ್ಲಿ ಆರು ಬಾರಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಸೋಲಾಪುರ ಕಾರ್ಯಕ್ರಮಕ್ಕೆ ಭೇಟಿ ನೀಡುವುದರೊಂದಿಗೆ ಏಕನಾಥ ಶಿಂದೆ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಅವರು ಎಂಟನೆಯ ಬಾರಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿದಂತಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಿರುವುದನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷವು, ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳೂ ರಾಜ್ಯಕ್ಕೆ ಭೇಟಿ ನೀಡುತ್ತಿರುವುದೇ ಬಿಜೆಪಿಯು ಮಹಾರಾಷ್ಟ್ರದಲ್ಲಿ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತಿದೆ. ಅದಕ್ಕೆ ಸಾರ್ವಜನಿಕರ ಬೆಂಬಲದ ಬಗ್ಗೆ ಇನ್ನಾವುದೇ ವಿಶ್ವಾಸ ಉಳಿದಿಲ್ಲ ಎಂದು ವ್ಯಂಗ್ಯವಾಡಿದೆ.